about me

Saturday 14 March 2015

ಮೌನ...!

ಶ್....! ಎಂದು ಕ್ಲಾಸಿಗೆ ಬಂದ ಟೀಚರ್ , ಬಾಯಿ ಮೇಲೆ ಬೆರಳಿಟ್ಟಾಗ ತರಗತಿಯೆಲ್ಲಾ " ಗಪ್ ಚುಪ್ " ಎಂದು ವಿದ್ಯಾರ್ಥಿಗಳೆಲ್ಲಾ ಸದ್ದಿಲ್ಲದೆ ಕುಳಿತುಕೊಳ್ಳುವ ಕ್ರಿಯಾ ವಿಶೇಷಣವನ್ನು ಮೌನ ಎಂದು ಕರೆಯಲು ಅಷ್ಟು ಸಮಂಜಸವಲ್ಲ ಎನಿಸುತ್ತದೆ . ಏಕೆಂದರೆ ಅದು ಸದ್ದನ್ನು ಹದ್ದುಬಸ್ತಿನಲ್ಲಿಟ್ಟ ಕಾಲವಾಗಿರುವುದರಿಂದ ' ನಿಶ್ಯಬ್ಧ' ಎನ್ನಲಡ್ಡಿಯಿಲ್ಲ.
ಮೌನವೆಂಬುದು ಮನಸಿನ ಮಾತು . ಅದನ್ನು ಕಿವಿಯ ಬಳಿ ಕೂಗಿ ಹೇಳುವಂತದ್ದಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅನುಭವಿಸುವ ಸದ್ದಲ್ಲದ ಸದ್ದೇ ಈ ಮೌನ ಎಂಬುದು ಅನುಭವಿಸಿದವರ ಅನುಭವ ಅಂಬೋಣ . ಹೇಳುವ ಮಾತಿನಲ್ಲಿ ಅರ್ಥವೊಂದಿದ್ದರೆ , ಹೇಳದ ಮಾತಿನ ಮೌನದಲ್ಲಿ ನೂರಾರು ಅರ್ಥಗಳಿರುತ್ತವೆ. " ಮಾತು ಬೆಳ್ಳಿ , ಮೌನ ಬಂಗಾರ " ಎನ್ನುವುದು ಇದಕ್ಕೆ ಇರಬಹುದೇನೊ...?. ಪ್ರೇಮಿಗಳಿಗೆ ಕೇಳಿದರೆ ಬಹುಶಃ ಮೌನದ ಮಾತು ಅರ್ಥವಾಗಬಲ್ಲದು.
ಕಣ್ಣಂಚಲ್ಲೇ ಕರೆದು ಕೂರಿಸುವ, ತುಟಿಯಂಚಲ್ಲೇ ನಕ್ಕು ಮತ್ತು ಬರಿಸುವ ಮಾಟದ ಶಕ್ತಿ ಮೌನಕ್ಕಿದೆ. ಕೆಲವೊಮ್ಮೆ ಎಷ್ಟೋ ಪ್ರಶ್ನೆಗಳಿಗೆ ಮೌನವೇ ಉತ್ತರವಾಗಿಬಿಡುತ್ತದೆ. ಹಿರಿಯರು ಹೇಳಿದ ಹಾಗೆ ' ಮೌನಂ ಸಮ್ಮತಿ ಲಕ್ಷಣಂ ' ಎಂಬುದು ಹೆಚ್ಚು ಸಂದರ್ಭಗಳಲ್ಲಿ ಅನ್ವಯಿಸಿಬಿಡುತ್ತದೆ. ಹಾಗಂದ ಮಾತ್ರಕ್ಕೆ ಮಾತೇ ಆಡಬಾರದು ಅಂತಲ್ಲ , ಅಥವಾ ಮಾತಿಗೆ ಬೆಲೆಯಿಲ್ಲ ಅಂತೇನಿಲ್ಲ. ಮಾತು ಆಡಲೇಬೇಕಾದ ಸಂದರ್ಭದಲ್ಲಿ ಮೌನ ಸಲ್ಲದು. ಹಾಗೆಯೇ ಎಷ್ಟೋ ಸಂದರ್ಭಗಳಲ್ಲಿ ಮೌನವೇ ವಾಸಿ ಎನಿಸಿಬಿಡುತ್ತದೆ.
ನಿಜಕ್ಕೂ ಮೌನವೆಂಬುದು ನಮ್ಮೆಲ್ಲರ ಮನಸ್ಸಿಗೆ ಟಾನಿಕ್ ಇದ್ದಂತೆ . ಮೌನವೆಂಬುದು ಧ್ಯಾನವಿದ್ದಂತೆ .ಮೌನವು ಮನಸ್ಸಿನ ಶಸ್ತ್ರದಂತೆ. ಅದು ಒಳಗೇ ಸಾಣೆ ಹಿಡಿದು ಹರಿತಾದಷ್ಟು ಒಳಗಿನ ಅಂತ:ಶಕ್ತಿ ಇಮ್ಮಡಿಯಾಗಬಲ್ಲದು. ಆತ್ಮವಿಶ್ವಾಸ ವೃದ್ಧಿಸಬಲ್ಲದು, ಯಾವುದೇ ವಿಚಾರವನ್ನು ಅಳೆದು ತೂಗಿ ನೋಡುವ ಕ್ಷಮತೆ ಹೆಚ್ಚಬಲ್ಲದು, ಮನಸ್ಸಿನಲ್ಲೇ ತರ್ಕಿಸಿ ತಕ್ಕುದಾದ ಮುತ್ತಿನಂತ ಮಾತು ಹೊರಬರಬಲ್ಲದು. ಹತ್ತು ಮಾತು ಹೇಳುವ ಬದಲು ಒಂದು ಮುತ್ತಿನಂಥ ಮಾತು ಬರುವುದು ಮನಸ್ಸು ವಿಚಾರಗಳಲ್ಲಿ ಪಕ್ವಗೊಂಡಾಗ . ವ್ಯಕ್ತಿ ಹೆಚ್ಚು ಮೌನಿಯಾದಷ್ಟು ಆತನ ಮನಸ್ಸು ಹೆಚ್ಚು ಧೃಡವಾಗುತ್ತಾ ಗಟ್ಟಿಗೊಳ್ಳುವ ಸಾಧ್ಯತೆ ಹೆಚ್ಚು ಅಂದಮೇಲೆ ಮೌನಕ್ಕೂ ಮಾತಿದೆ ಎಂದಾಯ್ತು...!!!

No comments:

Post a Comment