about me

Tuesday 18 November 2014

ಅನಿಸುವಷ್ಟು...!

ಸುಮ್ಮನಿದ್ದುಬಿಡಬೇಕೆನಿಸುವಷ್ಟು
ಗೊಂದಲ ಮನಸಿನೊಳಗೆ
ಎದ್ದು ಓಡಬೇಕೆನಿಸುವಷ್ಟು
ತುಮುಲ ಕನಸಿನೊಳಗೆ
ಇನ್ನೂ ಇರಬೇಕೆನಿಸುವಷ್ಟು
ಹಂಬಲ ಜಗದೊಳಗೆ
ಭ್ರಮೆಯಿಂದ ಹೊರಬರಬೇಕೆನಿಸುವಷ್ಟು
ವಾಸ್ತವತೆಯ ಬಲೆಯೊಳಗೆ
ಒಂದೊಂದೇ ದಾರದ ಎಳೆಯಾಗಿ
ಬಿಡಿಸಿಕೊಳ್ಳುವಷ್ಟು ತಾತ್ಸಾರ...!!

ಇನ್ನೂ ತೊದಲುವಷ್ಟು ಅಕ್ಷರ
ಬಹುಶಃ ನಾಲಗೆಗೂ ದೂರ
ಎಲ್ಲವನ್ನೂ
ಹೇಳಿಕೊಳ್ಳಬೇಕೆನಿಸುವಷ್ಟು ಕಾತರ
ಕೇಳಿಸಿಕೊಳ್ಳುವಷ್ಟು ಉದಾರ
ತೋರಬೇಕಷ್ಟೇ...!!

ಇಷ್ಟು ಹೇಳಿದರಷ್ಟೇ ಸಾಲದು
ಹೇಳದಷ್ಟು ಕೇಳದಷ್ಟು ಅವೆಷ್ಟೋ
ಲೆಕ್ಕ ಹಾಕಬೇಕೆನಿಸುವಷ್ಟು
ಗುಣಿಸಿಕೊಳ್ಳಬೇಕೆನಿಸುವಷ್ಟು
ಸುಖದ ಸೂತ್ರದ ಜಾಮಿಟ್ರಿ ಬಾಕ್ಸಿನಲ್ಲಿ
ಬರೆದುಕೊಳ್ಳುವಷ್ಟು ಬರವೇನಿಲ್ಲ
ಕಪ್ಪು ಕಡ್ಡಿಯ ಪೆನ್ಸೀಲಿನಲ್ಲಿ
ಆದರೆ
ಅಳಿಸಿಹಾಕುವಷ್ಟು
ನೆನಪುಗಳಿವೆ ರಬ್ಬರಿನಲ್ಲಿ...!!

Tuesday 2 September 2014

ಯಾರವಳೊ ಮಾಯೆ...?

ಸುಪ್ತಮನಸ್ಸಿನೊಳಡಗಿಹುದು ಗುಪ್ತಗಾಮಿನಿಯ ಛಾಯೆ
ಛಾಯೆಯೊಳಗೂ ಜ್ವಲಿಸುತಿಹಳು ಯಾರವಳೊ ಮಾಯೆ
ನಿತ್ಯ ನಿರಂತರ ಪ್ರೇಮಧಾರೆಯ ಹರಿವಿನಾ ಪರ್ವ
ಸ್ವಪ್ನದಿ ಕಾಣುಹ ಚೆಲುವಿಗಿಂತವಳು ಅಖರ್ವ

ಪ್ರೇಮದ ಅಜಾರಿಗೆ ನೀಡಬಲ್ಲಳು ಒಲವಿನಮೃತ
ಅಮೃತ ನೀಡಲವಳು ಮಡಿಯುವಾಸೆ ಜೀವಂತ
ಹೃದಯ ಗೆದ್ದ ಅನಭಿಷಿಕ್ತ ಪ್ರೇಮದೇವತೆ
ತೆರೆದಿಡಲೆ ಮನದಾಸೆಯ ಮೌನದ ಕಂತೆ

ಇನ್ನೂ ಕಾಡುತಿಹಳು ತಿಳಿಯದು ಅರಿವಿನಾ ತಿರುಳು
ಇನ್ನೂ ನೋಡುತಿರಲು ಕಳೆಯುವುದು ಹಗಲು ಇರುಳು
ಬಿಡದೆ ಬಂಧಿಸಿಹಳು ಕಬಂಧ ಬಾಹುವಿನಲಿ
ಅದುವೇ ಸುಪ್ತಮನಸಿನ ಖಾಲಿಯಾದ ಅಮಲಿನಲಿ....!!!

ಧಿಕ್ಕಾರವಿರಲಿ...!!

ಓ ವಸುಂಧರೆ ಧರೆ ಧರಣೀ ಧರಿತ್ರಿ
ವಸುಧೆ ವಸುಮತಿ ಸಹನಾಧರಣಿ ಧಾರಿಣಿ
ಕರುಣಾಮಯಿ ಎಂದೆಲ್ಲಾ ಬಣ್ಣಿಸಿಕೊಂಡ ಮಹಾತಾಯಿ
ಇಂದೇಕೆ ಕ್ರೂರಿಯಾದೆ ಈ ಮುನಿಸೇಕೆ
ಈ ಮೌನವೇಕೆ ಭೂತಾಯಿ
ಆಡಿಕೊಂಡಿದ್ದ ಕಂದಮ್ಮಗಳನ್ನು ಕರೆದು
ನಿನ್ನ ಒಡಲಿಗಾಕಿಕೊಂಡು ಮೌನಿಯಾದೆಯಲ್ಲ
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

ಅಮ್ಮ ಎಂದು ಕೂಗಿದ ಕಂದನ ರೋಧನೆಯ
ಕೇಳದೆ ಕಿವುಡಾದೆಯಾ ?
ಎಡವಿ ಬೀಳುವಾಗ ಎಚ್ಚರಿಸದೆ
ಕಾಣದ ಕಣ್ಣಂತಾದೆಯಾ ?
ಹೆತ್ತವರ ಆಕ್ರಂದನ ನಿನಗೆ ಜೈಕಾರವಾಯಿತೆ ?
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

ಹನಿನೀರಿಗಾಗಿ ನಿನ್ನ ನಾಭಿಯ ಕತ್ತರಿಸಿದರ ಮತ್ಸರವೇ ?
ಮತಿಗೆಟ್ಟ ಮನುಕುಲದ ಅತಿರೇಕಿಯೆಂಬ ತಾತ್ಸಾರವೇ ?
ಹಾಲ್ಗೆನ್ನೆಯ ಮುದ್ದು ಮುಖವ ಮುದ್ದಾಡೋ ಆಸೆಯೋ ?
ಕರೆದರೂ ಬಾರರೆಂಬ ಹತ್ತಿಕ್ಕಿದ ಹತಾಶೆಯೋ ?
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

ನಿಜ , ನಾವು ಮನುಜರು ಕಟುಕರು ಸಂಪತ್ತಿನಾಸೆಗಾಗಿ ಗಣಿಗಾರಿಕೆಯ ನೆಪದಲ್ಲಿ
ನಿನ್ನ ಗರ್ಭವ ಸೀಳಿ ಲೂಟಿ ಮಾಡಿದೆವು
ಕೋಟಿ ಮಾಡಿದೆವು ಕೋಟೆ ಕಟ್ಟಿದೆವು
ನಿನ್ನ ಧೂಳು ಮೆತ್ತಿಕೊಂಡು ಮದವೇರಿ ಮಲಗಿಕೊಂಡೆವು
ನನಗೊಂದು ಆಣೆಮಾಡು
ಅರಳುವ ಹೂಗಳ ಚಿಗುರಲ್ಲೆ ಚಿವುಟದಿರು
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

Friday 13 June 2014

ಬುಡುಬುಡಿಕೆ...!

ಪಾಪಿ ಹಣೆಮ್ಯಾಗು ಬರ್ದವ್ನೆ ಬ್ರಹ್ಮ ಬರ್ಕತ್ತು
ಅಳ್ಸಂಗಿಲ್ಲ ಬುಡಂಗಿಲ್ಲ ಅವ್ನ ನಿಯತ್ತು
ಬರ್ದಂಗ್ ಬದುಕ್ಬೇಕು ಎಲ್ಲಾ ಅವ್ನಾಟ
ಹೇಳ್ದಂಗ್ ನಡೀಬೇಕು ಹೇಳ್ಕೊಟ್ ಪಾಠ

ಹಾಲ್ ಕುಡುದ್ರು ಬದ್ಕಂಗಿಲ್ಲ
ವಿಷ ಕುಡ್ದೋರ್ ಪಾಡೇನು
ಮಣ್ಣಿನ್ ಋಣ ತೀರುಸ್ಲೇಬೇಕು
ಮಣ್ಣಿಗೋಗಕ್ ಮುಂಚೇನೆ
ಮನ್ಷನ್ ಜನ್ಮ ತೊಳ್ಕಂಬೇಕು
ಕರ್ಮ ಮಾಡಿದ್ ಕೈಯಲ್ಲಿ

ಸೇಂದಿ ಕುಡ್ಕಂಡ್ ಬಾಯ್ ಒರಸ್ಕಂಡ್ರೆ ಆಯ್ತು
ನಮಗ್ಯಾಕ್ಬೇಕು ಕುಡುಕ್ರು ಸವಾಸ
ಸುಳ್ಳೇಳುದ್ರು ಹೆಂಡ್ರು ಬಯ್ತಾಳೆ
ಕಣ್ ಕೆಂಪಾಗಯ್ತೆ
ಹೆಂಡ ಕುಡುದ್ಮೇಲ್ ಸುಳ್ ಹೇಳ್ಬಾರ್ದು
ಹೊಟ್ಟೆ ತಂಪಾಗಯ್ತೆ

ಹಣೆಗ್ ವಿಭೂತಿ ಬಳ್ಕಂಡ್ ಹಣೆಬರ ಮುಚ್ಕೊಳ್ಳೋಕ್ಕಾಗಲ್ಲ
ಹಣೇಲ್ ಬರ್ದಿದ್ ಯಾವ್ದೂ ಸುಳ್ಳಾಗಕ್ಕಿಲ್ಲ
ಬುಡ್ ಬುಡುಕೇಲಿ ಹೇಳಿದ್ದೆಲ್ಲ ನಿಜವಲ್ಲ
ಬುಡ್ ಬುಡುಕೇಲಿ ಹೇಳಿದ್ದೆಲ್ಲ ನಿಜವಲ್ಲ.....!!

Saturday 31 May 2014

ನಿನದೇ ದಾರಿ ...!!

ಎದೆಯೊಳ್ಗೊಂದ್ ಪೆನ್ನು ಬರೆದಯ್ತೆ
ಕೆಂಪು ಇಂಕಿನಲ್ಲಿ
ಎದೆಯ ಪುಸ್ತಕದ ಹಾಳೆಗಳೆಲ್ಲಾ
ಖಾಲಿ ಖಾಲಿ ...,
ಅಕ್ಷರಗಳೆಲ್ಲಾ ಕೆಂಪು ಕೆಂಪು ...

ಬರೆದು ಕೊಳ್ಳಲೇನಿದೆ,ಬರೆದದ್ದೆಲ್ಲಾ ಆಗಿದೆ
ಹೋಗು ಎಲ್ಲೇ ಹೋಗು ದಾರಿ ನಿನ್ನದೆ
ಎಡವಿ ಬಿದ್ದರೂ ಎತ್ತೋರಿಲ್ಲ ನಿನಗೆ ನೀನೇ
ಕನಸುಗಳ ಬೆನ್ನೇರಿ ಹೋಗು ನೀ ಸವಾರಿ
ಪಯಣದಲಿ ನಿನಗದೇ ದಾರಿ
ಗೆಲುವಿನ ಸಿಂಚನಕೆ ಬೆನ್ನು ಬಿದ್ದ ಪರಿ...

ಆಗಸಕೆ ಏಣಿ ಹಾಕಲು
ಹತ್ತು ನೀ ಅವಕಾಶದ ಮೆಟ್ಟಿಲು
ಏನೇ ಎದುರಾದರೂ ಮೆಟ್ಟಿ ನಿಲ್ಲು ಸವಾಲು
ಗರಿಕೆದರಿದೆ ಆಸೆಯ ನವಿಲು
ಬಾಳೆ ಎಲೆಗೂ ಪಾಲಿದೆ ಅನ್ನದ ಋಣ
ನಾಳೆಗಾದರೂ ತೀರಿಸು ಮಣ್ಣಿನ ಋಣ...!!

Tuesday 27 May 2014

ಉಳಿದು ಕೊಂಡದ್ದು.....!

ಯಾರಿಗೆಂದೋ ಬರೆದು ನೆಡಲಾಗದೆ
ಉಳಿದ ಗೋರಿಯ ಕಲ್ಲುಗಳು
ಯಾರೋ ಬರುವರೆಂದು ಕೂತು ಕೊಡಲಾಗದೆ
ಓಡಿಬಂದ ಬಾರಿನ ಬಿಲ್ಲುಗಳು...!

ನಗಲಾಗದಿದ್ದರೂ ನಕ್ಕಂತೆ
ನಟಿಸಿ ತೋರಿಸಿಕೊಂಡ ಹಲ್ಲುಗಳು
ಕಾಯುತ್ತಾ ಕುಳಿತು ಕೊಂಡವರಿಗೆ ಹೋಗದೆ
ಕಾಯಿಸಿ ಸತಾಯಿಸಿದ ಬೆಂಚುಕಲ್ಲುಗಳು...!

ಯಾವುದಕ್ಕೂ ಪ್ರಯತ್ನಿಸದೆ
ಎಲ್ಲಾ ಹಣೆಬರಹ ಎಂಬ ನಮ್ಮದೇ ನಿಲುವುಗಳು
ಯಾರೋ ಗೆದ್ದರೆಂದು ಪಟಾಕಿ ಹಚ್ಚಿ
ಸಂಭ್ರಮಿಸಲಾಗದ ಗೆಲುವುಗಳು...!

ಯಾರ ಹೆಸರಿನೊಂದಿಗೆ ಇರಬೇಕಾಗಿದ್ದು
ಅವರಿಗೇ ಕೊಟ್ಟಂತ ಲಗ್ನಪತ್ರಿಕೆಗಳು,
ಯಾರನ್ನು ನೋಡಬಾರದೆಂದುಕೊಂಡಿದ್ದು
ಅವರಿಗೇ ಕೊಟ್ಟಂತ ವಿಸಿಟಿಂಗ್ ಕಾರ್ಡುಗಳು...!

ತಲೆ ಕೆಡಿಸಿಕೊಂಡ ತಲೆಬುಡವಿಲ್ಲದ
ತರಲೆ ತಕರಾರಿನ ತರ್ಕಗಳು
ಬುದ್ಧಿ ಬೆಳೆಯದಿದ್ದರು
ಬೆಳೆಸಿಕೊಂಡಂತೆ ಬೆಳೆದ ಗಡ್ಡಗಳು...!

ಗುರುತಿಲ್ಲದಿದ್ದರೂ ಗುರುತಿಗಾಗಿ
ಗುರುತಿಸಿಕೊಂಡ ಗುರುತಿನ ಚೀಟಿಗಳು
ಮರೆತೇ ಹೋಗಿದ್ದರು ಮರೆಯುವುದಕ್ಕಾಗಿ
ಮೆರೆಯುವ ಗುಂಡಿನ ಪಾರ್ಟಿಗಳು...!

ಬೇಡದಿದ್ದರೂ ಬೇಕೆಂಬ ಹಂಬಲಗಳು
ಬೇಕಿದ್ದರೂ ಸಿಗಲಾರದಂತ ಸಂಬಂಧಗಳು
ಬಂಧಗಳೆಲ್ಲ ಸಂಬಂಧಗಳಲ್ಲಿ
ಬೆಂದು ಹೋಗಿದ್ದರೂ
ತೀರಿಸಲಾಗದಾಗಿದೆ ಋಣಾನುಬಂಧ
ಉಳಿದುಕೊಂಡವವು...............!

Thursday 1 May 2014

ಎಂದು ಬರುವೆ

ಗೆಳೆಯ ಬಾಗಿಲಲ್ಲೇ ನಿಂತಿಹೆನು
ಒಳಗೂ ಹೋಗದೆ,ಹೊರಗೂ ಬಾರದೆ
ನೀ ಬರುವೆಯೆಂಬ ಆಸೆಯ ಬುತ್ತಿ ಹೊರಲಾರದೆ
ನೀ ಇರುವಲ್ಲಿ ಬರಲೂ ಆಗದೆ,,,

ಎದೆಯಲೇನೋ ಸಂಭ್ರಮ
ನಲ್ಲನ ನೆನಪು ನೆನೆಸಿದೆ ಈ ಪ್ರೇಮ
ಅಣಕಿಸುತಿದೆ ನನ್ನ ನನದೇ ಕಣ್ಣುಗಳು
ದೃಷ್ಟಿಯಾದೀತೇನೊ ಹಾಕಿಕೊಳ್ಳಲೇ ಕಪ್ಪುಬೊಟ್ಟು
ತಲೆಯೇರಿ ಕುಳಿತಿದೆ ಮಲ್ಲಿಗೆ ಹೂದಂಡು
ಮೈ ಮರೆತು ಬೀಳುವನೇನೋ ನಾ ನನ್ನೇ  ಕಂಡು

ತಡಮಾಡದಿರು ಇನ್ನೂ ಬಾ ಇನಿಯ
ಬಾರದೆ ಸತಾಯಿಸದಿರು ತಾಳೆನು ವಿರಹದುರಿಯ
ಕಾತರಿಸಿ ಕಾದಿಹೆನು ಅಪ್ಪುಗೆಯೊಂದ ನೀಡುವೆಯಾ
ನೀನೇ ಬಂದು ಪ್ರೇಮದ ಒಪ್ಪಿಗೆ ಕೇಳುವೆಯಾ

ಇನ್ನೇನು ಬಂದೇಬಿಟ್ಟಿತು ನೀ ಬರುವ ಕ್ಷಣಗಳು
ವಿಸ್ಮಯಳಾಗಿಹೆನು ,, ಕಾದಿರುವೆನು,,,
ಆದರೂ ಬಾರದೆ ಮಳೆಹನಿಯಾಗಿ ಬಂದು
ನನ್ನೊಡನೆ ನೆಂದು
ಪ್ರೇಮದ ಚಳಿತಂದು
ಹೋದೆಯಾ ಕಾಣದಂತೆ,ಮತ್ತೆ ಕಾಯುವೆನು
ಕೊಟ್ಟು ಹೋಗು ನೀ ಬರುವ ದಿನಾಂಕವನ್ನು.

Tuesday 11 March 2014

ಯಾರು...?

ಬಾನಿಗೆ ತಾರೆ
ಕೊಳದಲ್ಲಿ ತಾವರೆ
ಇಟ್ಟವರಾರು...?

ಹುಟ್ಟಿಗೆ ಸಾವು
ನಗುವಿಗೆ ನೋವು
ಕೊಟ್ಟವರಾರು...?

ಬೆಳಕಿಗೆ ಕತ್ತಲೆ
ಜನುಮಕೆ ಬೆತ್ತಲೆ
ಇಟ್ಟವರಾರು...?

ನದಿಗೆ ತೀರವ
ಕಡಲಿಗಾಳವ
ನೀಡಿದವರಾರು...?

ಭೂಮಿಗೆ ಬಾನು
ನಿನಗೆ ನಾನು
ಸೇರಿಸಿದವರಾರು...?

Thursday 6 March 2014

ಇನ್ನೊಂದು ಮಾತಿದೆ ಕೇಳು ಬಾ...

ಬಿಡದೆ ಸುರಿದ ಜಡಿಮಳೆಯ ನಡುವೆಯೂ
ನಿನ್ನ ನಡೆಯ ಕಾಲ ಸದ್ದಿನ ಸಪ್ಪಳಕೆ
ಒಂದೊಂದೇ ಹನಿ ಬೀಳುತಿರಲು
ಇದೇನು ಪ್ರೀತಿಗಾಗಿ ಸುರಿದ ಮಳೆಹನಿಯೋ
ಮಳೆಯಾಗಿ ಸುರಿದ ಪ್ರೀತಿಯ ಹನಿಗಳೋ
ಹೇಳು ಬಾ...ಇನ್ನೊಂದು ಮಾತಿದೆ ಕೇಳು ಬಾ ॥

ಆ ಮೋಡಗಳು ಮುತ್ತಿಟ್ಟಂತೆ ಗಿರಿಸಾಲುಗಳ
ನೀನೇ ಅಪ್ಪಣೆ ಕೊಟ್ಟಂತೆ,ಮುಂಗುರುಳು
ಬಾಗಿ ಬಾಗಿ ಮುತ್ತ ನೀಡುತ್ತಿವೆ,
ನೋಡಲಾಗದೆ ನನ್ನ ಕಣ್ಣಹನಿಗಳು ಜಾರಿ
ಮಳೆ ಹನಿಯೊಂದಿಗೆ ಸೇರುವ ಮೊದಲೇ
ಹೇಳು ಬಾ...ಇನ್ನೊಂದು ಮಾತಿದೆ ಕೇಳು ಬಾ ॥

ತುಂತುರು ಮಳೆಹನಿಯ ಸದ್ದಿನ ನಡುವೆಯೂ
ಅದೇನು ಮೋಡಿಯೋ ನಿನ್ನ ಕೈಬಳೆಗಳು ಮಾಡಿವೆ
ಮಿಟುಕಿಸದಿರು ಕಣ್ಣನ್ನು
ಸೂರ್ಯ ಕಿರಣ ತಾಗಿ ಹೋಗುವ ಮುನ್ನ
ನಿನ್ನ ಕಣ್ಣ ಕೊಳದಲ್ಲಿ ಮಂಜು ಕರಗುವ ಮುನ್ನ
ಹೇಳು ಬಾ...ಇನ್ನೊಂದು ಮಾತಿದೆ ಕೇಳು ಬಾ ॥

ಅದೇ ನೆನಪು

ಪದೇ ಪದೇ ನೆನಪಾಗುತಿದೆ ನಿನ್ನ ನೆನಪು
ಅದೇಕೋ ಪದೇ ಪದೇ ಅದೇ ನೆನಪು
ಪದೇ ಪದೇ ಮನಸು ಹೊರಳುತಿದೆ ನಿನ್ನೆಡೆಗೆ
ಅದೇಕೋ ಪದೇ ಪದೇ ಅದೇ ನೆನಪು
ಪದೇ ಪದೇ ನಿನದೇ ಬಿಂಬ ಜಗನೋಡಲು
ಅದೇಕೋ ಪದೇ ಪದೇ ಅದೇ ನೆನಪು
ಪದೇ ಪದೇ ಅದೇ ಕನಸು
ಅದೇಕೋ ನಿನ್ನ ನೋಡುವ ಮನಸು
ಪದೇ ಪದೇ ಅದೇ ಹಾಡು ಗುನುಗುತಿರಲು
ಅದೇಕೋ ಅದೇ ನಿನದೇ ನೆನಪು
ಪದೇ ಪದೇ ನಿನ್ನೊಡನೆ ಮಾತನಾಡುವಾಸೆ
ಅದೇಕೋ ನಿನದೇ ನೆನಪಾಗಲು
ಪದೇ ಪದೇ ನಿನ್ನ ಹೆಸರೇ ನೆನಪಿಗೆ ಬರಲು
ಅದೇಕೊ ತುಟಿ ತೆರೆದಾಗಲೂ,ಕೂಗುವಾಗಲೂ
ಅದೇಕೋ ಪದೇ ಪದೇ ನೆನಪಾಗಲು
ಪದೇ ಪದೇ ನೀನೇ ಸುಳಿದಾಡಿದಂತೆ  ಸನಿಹ
ಅದೇಕೋ ನಾ ಜಗದ ಒಡನಾಟದಲ್ಲಿರಲು
ಪದೇ ಪದೇ ಅದೇ ನೆನಪು ಅದೇಕೋ ...?

ನಿನದೇ ಅಮಲು

ಸವಿಮಾತು ಬಾರದೆ ತೊದಲುತಿದೆ
ಚುಂಬಿಸಲು ತುಟಿ ಹಂಬಲಿಸಿದೆ
ನಿನ್ನ ತುಟಿಯಂಚಿನ ನಗು ಆಹ್ವಾನ
ಮೈ ಮರೆಸಿದೆ ನನ್ನನು ಈ ಮೌನ.

ಒಪ್ಪಿಗೆ ನೀಡೇ ಓ.....ಗೆಳತಿ
ಎಂದೆಂದು ನಿನಗೇ ಈ ಪ್ರೀತಿ
ಕತ್ತಲು ನೀಗಲು ಈ ಹಣತೆ
ಪದವಾಗಿ ಬಾರೆಲೆ ಓ ಕವಿತೆ
ಅಲೆಯಾಗಿ ಸೇರಲು ಕಡಲೊಳಗೆ
ಕಾಯುತಲಿರುವೆ ನಾ ಬಯಲೊಳಗೆ.

ಜೊತೆಯಲಿ ಜೊತೆಯಲಿ ಬರುತಿರಲು
ನನಗೊಂದೂ ತಿಳಿಯದು ಇರುಳೂ-ಹಗಲು
ನಿನದೇ ನಿನದೇ ಚಿಂತನೆಯು
ಒಳಗೊಳಗೆ ಏನೋ ಸಂಭ್ರಮವೂ..
ಕ್ಷಣಾ..ದಿನಾ..ಯುಗಾ...ಜನುಮ
ನೀ ನನಗೆ...ನನಗೆ....ನನಗೇ...

ನಿನ್ನವ ನಾನು ಮರೆಯದಿರು
ಎನ್ನ ಹೃದಯವ ತೊರೆದು ಹೋಗದಿರು
ಸಂಜೆಗೆ ಬಾರೆಲೆ ಮೆರವಣಿಗೆ
ನನ್ನ ಹೃದಯವೇ ಹಾಸುವೆ ನಿನ ನಡೆಗೆ
ಕ್ಷಣಕ್ಷಣಕೂ ನನ್ನ ಕೊಲ್ಲಲು
ಅದೇಕೋ ನಿನದೇ ಅಮಲು...

ನಾ ಪ್ರೇಮಿಯಲ್ಲ

ನಾ ಪ್ರೇಮಿಯಲ್ಲ
ಬದಕು ಭಾವನೆಗಳೊಳಗೆ ಬೆಂದು ಹೋಗಿದ್ದರು,
ಒಲವ ಬೂದಿಯೊಳಗೆ ಆ ನೆನಪಿನ ಬಿಸಿ ಕೆಂಡ
ಸುಡುತಿದೆ ಒಳಗೊಳಗೆ ಆದರೂ...
ನಾ ಪ್ರೇಮಿಯಲ್ಲ...!

ನಾ ಪ್ರೇಮಿಯಲ್ಲ
ಕನಸುಗಳ ಕಟ್ಟೆಯೊಡೆದು ಮುನ್ನುಗ್ಗಿ
ನಿದಿರೆಯ ಹೆಸರಲ್ಲಿ ಕನಸುಗಳ ರೌರವ ನರ್ತನ
ಎನ್ನ ಮನಸ ತುಂಬ ಅವಳೇ ತುಂಬಿದ್ದರು
ನಾ ಪ್ರೇಮಿಯಲ್ಲ...!

ನಾ ಪ್ರೇಮಿಯಲ್ಲ
ಅವಳು ಬರುವ ದಾರಿ ಕಾಯುತ
ನನ್ನ ದಾರಿ ಮರೆತ ನಾನು,ನನ್ನನ್ನೂ ಮರೆತೆ
ಅವಳು ಬರುವ ದಾರಿ ಮುಚ್ಚಿ ಹೋಗಿದ್ದರೂ,
ಬಂದೇ ಬರುವಳೆಂದು ಕಾಯುತ್ತಿದ್ದರೂ...
ನಾ ಪ್ರೇಮಿಯಲ್ಲ...!

ನಾ ಪ್ರೇಮಿಯಲ್ಲ
ಹೃದಯವೇಕೊ ದಿಗಿಲುಗೊಂಡಂತೆ ಕಂಪಿಸುತಿದೆ
ಅವಳು ಬರುವಳೇನೊ ಎಂದು ಮತ್ತೆ ಮತ್ತೆ
ಮನಸು ಹಠವಿಡಿದು ಮಗುವಿನಂತೆ
ರೋದಿಸುತಿದೆ ಆದರೂ...
ನಾ ಪ್ರೇಮಿಯಲ್ಲ***!!!!!!!!

ಹೀಗಾಯಿತು..

ಪರಿಚಯ ಅಪರಿಚಯವಾಯಿತು
ಸ್ನೇಹ ಮಾಸಿತು,ಪ್ರೀತಿ ಮೋಸವಾಯಿತು
ಬದುಕು ಸೋತಿತು,ಜೀವ ಮಾತ್ರ ಉಳಿಯಿತು.

ಕನಸು ಕರಗಿತು
ಹೃದಯ ಬೆಂದಿತು,ಮನಸು ನೊಂದಿತು
ಅವಳ ನೆನಪು ಮಾತ್ರ ಉಳಿಯಿತು.

ಕಣ್ಣೀರು ರಕ್ತವಾಯಿತು
ಉಸಿರು ಬಿಸಿಯಾಯಿತು
ಅವಳ ಮಾತ್ರ ಮರೆಯುವಂತಾಯಿತು.

ಮಾತು ಮೌನವಾಯಿತು
ನಗು ಮರೆತಾಯಿತು,ಚಿಂತೆ ಕಾಡಿತು
ಅವಳ ಪ್ರೀತಿ ಅರ್ಥವಾಗದಾಯಿತು.

ನಿಮಿಷ ವರುಷವಾಯಿತು
ವರುಷ ಯುಗವಾಯಿತು
ವಯಸು ಯೌವನ ಮೀರಿತು
ಅವಳ ಚೆಲುವು ಹಾಗೇ ಉಳಿಯಿತು.

ಅವಳ ಚೆಲುವು ಕಣ್ಣು ತುಂಬಿತು
ಬಾಳಿನ ಗುರಿ ಹಾದಿ ತಪ್ಪಿತು
ಬದುಕು ವಿಚಿತ್ರವಾಯಿತು
ಅವಳ ಚಿತ್ರ ಮಾತ್ರ ಮನದಲ್ಲಿ ಅಚ್ಚಾಯಿತು.

ಅವಳ ನೋಟ ಮನಸು ಕೆಡಿಸಿತು
ಅವಳ ನಗು ನೋವ ಮರೆಸಿತ್ತು
ಮರೆತ ನೋವು ಮತ್ತೆ ಬೆಸೆಯಿತು
ಅವಳು ಕೊಟ್ಟ ನೋವು ಹಾಗೇ ಉಳಿಯಿತು...

ಆ ಸಮಯ...!

ಸಂಧ್ಯಾಸ್ತಮವಾದರೂ ಸೂರ್ಯಮ
ಇರುಳೋದಯದಲಿ ಚಂದ್ರಮ
ಪ್ರತೀರಾತ್ರಿಯು ಸ್ವಪ್ನದ ಸಮಯ
ಅಂದೆಲ್ಲಾ ಬರೀ ನಿನ್ನ ನೆನಪೋದಯ
ನೆನಪೆಲ್ಲಾ ಮೀರಿದ ಸಮಯ
ನಿಜವಾಗಿಯೂ ಅದೂಂದು ಅಮೃತಮಯ
ಅಮೃತವಿಲ್ಲದ ಸಮಯ
ಅದೂಂದು ಕರಾಳಮಯ
ಕರಾಳಮಯವಾದ ಸಮಯ
ಅವಳಿಗಿಲ್ಲವಾದಂತೆ ಇನಿಯ
ಇನಿಯನು ಬರುವ ಸಮಯ
ಅವಳ ಮನದಿ ಕಾತರಮಯ
ಕಾತರಮಯವಾದ ಸಮಯ
ಅವಳಿಗಾದಂತೆ ಲೋಕ ಪ್ರಳಯ
ಪ್ರಳಯವಾಗುವ ಸಮಯ
ಇಬ್ಬರೊಡಗೂಡಿ ಕಣ್ಮುಚ್ಚೋ ಆಶಯ
ಕಣ್ಮುಚ್ಚುವ ಆ ಸಮಯ
ನಿಜವಾಗಿಯೂ ಸುಂದರ ಸಮಯ
ಸುಂದರವಾದ ಆ ಸಮಯ
ಅವರಿಗಾಗಿತ್ತು ಅನಿವಾರ್ಯ
ಅನಿವಾರ್ಯವಾದ ಆ ಸಮಯ
ಪ್ರತಿನಿತ್ಯ ಬೇಸರಮಯ
ಬೇಸರಮಯವಾದ ಸಮಯ
ಸಮಯವೇ ಬೇಡದಂತ ಬೇಸರ
ಅವಳಿಗೆ ಅವಳ ಬಾಳಿನ ನೇಸರ
ಸಿಗದಿದ್ದರೆ ಅವಳ ಪ್ರಾಣಾಹಾರ
ಅಲ್ಲಿಯವರೆಗೂ ಪ್ರೀತಿಯ ಸಮರ...***

Saturday 1 March 2014

ಆ ಒಂದು ರಾತ್ರಿ ...

ಬೆಳದಿಂಗಳಾ ಪ್ರಭೆಯ ತಂಪು ತುಂಬಿದ ಇರುಳಲಿ ನಲ್ಲೆಯ ಪ್ರಶ್ನೆಗೆ ನಲ್ಲನ ಜಾಣತನದ ಉತ್ತರಗಳು ತೂರಿಬಂದ ಆ ಒಂದು ರಾತ್ರಿ ...!

Friday 28 February 2014

ಖಾಯಂ site...!

ಮಾನವ ಜನ್ಮ ಸಿದ್ಧ ಹಕ್ಕು ಎಂಬಂತೆ ನನಗೂ
fixಆಯ್ತು ಮದುವೆ ಡೇಟು
startಆಯ್ತು ಸಂಸಾರವೆಂಬ ಸಾರೋಟು
ನನ್ನವಳಿಗೊಂದು ಆಸೆ ನೋಡಬೇಕು ಟೆಂಟು
ಇಲ್ಲಾಂದ್ರೆ ಅವಳು ನನ್ನೊಂದಿಗೆ ಟೂ
ಟೆಂಟಿಗೆ ಹೋಗಲು ಬೇಕೇಬೇಕಂತೆ ಸಾರೋಟು
ಇಲ್ದಿದ್ರೆ ಹಿಡ್ಕೊಂಡ್ ಬರ್ತಾಳೆ steel ಸೌಟು
ಒಂದು ಗಾಂಧಿ ನೋಟು ಕೊಡ್ಲೇಬೇಕು ಟೆಂಟಿನವನಿಗೆ ಹರಿಯಲು ಟಿಕೇಟು
ಒಳಗೆ ಹೋದರಂತೂ music ಮಾಡುತ್ತೆ ಸೀಟು
ಟೆಂಟಿನ ಪಕ್ಕದಲ್ಲೇ ತರಕಾರಿ ಮಾರ್ಕೇಟು !
kgಗೆ ಮೂರೇ ಕ್ಯಾರೇಟು
ತಗೊಳ್ಳೇಬೇಕು ಟಮೋಟು
ಇನ್ಮುಂದೆ ಸಿಗಲ್ವಂತೆ ಬೀಟ್ರೋಟು
ಇಪ್ಪತ್ತರ noteಕೊಟ್ಟರು ಕೊಡೋದಿಲ್ಲ coffee ಬೈಟು
ಇನ್ಮುಂದೆ ನಾವ್ ಹಾಕ್ಕೊಂಬೇಕು ಜೇಬಿಲ್ದಿರೋ ಪ್ಯಾಂಟು
ಮೂರ್ ಮದುವೆ ಮಾಡಿಸ್ಬಹುದು ಅಷ್ಟಾಗಿವೆ choultryರೇಟು,
ಆದ್ರೂ ಒಂದ್ ಡೌಟು..! ಕಡಿಮೆಯಾಗ್ತಿಲ್ಲ ಮದುವೆಗಳ percentage ರೇಟು,
ನಮ್ ನಾಯಕರುಗಳು ಚುನಾವಣೆಗೆ ಮಾತ್ರ ಬರ್ತಾರೆ ಕೇಳೋಕೆ ಓಟು ,
ರಸ್ತೆಗಳ ಸ್ಥಿತಿ ನೋಡಿದ್ರೆ ಹರಿದ ನೋಟು ,
ಚಂದ್ರಗ್ರಹಕ್ಕೆ ಹೋಗಿ ಬರಬಹುದು ಅಷ್ಟಾಗಿದೆ siteನ ರೇಟು
ತಿಳಿದಿರಲಿ ನಮಗೆಲ್ಲೋ ಒಂದ್ ಕಡೆ ಇದೆ ಖಾಯಂ site...!!

Wednesday 26 February 2014

my favourite quote .

my favourite quote ...!

'your attempt may fail
but never fail to make an attempt'