about me

Tuesday 2 September 2014

ಧಿಕ್ಕಾರವಿರಲಿ...!!

ಓ ವಸುಂಧರೆ ಧರೆ ಧರಣೀ ಧರಿತ್ರಿ
ವಸುಧೆ ವಸುಮತಿ ಸಹನಾಧರಣಿ ಧಾರಿಣಿ
ಕರುಣಾಮಯಿ ಎಂದೆಲ್ಲಾ ಬಣ್ಣಿಸಿಕೊಂಡ ಮಹಾತಾಯಿ
ಇಂದೇಕೆ ಕ್ರೂರಿಯಾದೆ ಈ ಮುನಿಸೇಕೆ
ಈ ಮೌನವೇಕೆ ಭೂತಾಯಿ
ಆಡಿಕೊಂಡಿದ್ದ ಕಂದಮ್ಮಗಳನ್ನು ಕರೆದು
ನಿನ್ನ ಒಡಲಿಗಾಕಿಕೊಂಡು ಮೌನಿಯಾದೆಯಲ್ಲ
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

ಅಮ್ಮ ಎಂದು ಕೂಗಿದ ಕಂದನ ರೋಧನೆಯ
ಕೇಳದೆ ಕಿವುಡಾದೆಯಾ ?
ಎಡವಿ ಬೀಳುವಾಗ ಎಚ್ಚರಿಸದೆ
ಕಾಣದ ಕಣ್ಣಂತಾದೆಯಾ ?
ಹೆತ್ತವರ ಆಕ್ರಂದನ ನಿನಗೆ ಜೈಕಾರವಾಯಿತೆ ?
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

ಹನಿನೀರಿಗಾಗಿ ನಿನ್ನ ನಾಭಿಯ ಕತ್ತರಿಸಿದರ ಮತ್ಸರವೇ ?
ಮತಿಗೆಟ್ಟ ಮನುಕುಲದ ಅತಿರೇಕಿಯೆಂಬ ತಾತ್ಸಾರವೇ ?
ಹಾಲ್ಗೆನ್ನೆಯ ಮುದ್ದು ಮುಖವ ಮುದ್ದಾಡೋ ಆಸೆಯೋ ?
ಕರೆದರೂ ಬಾರರೆಂಬ ಹತ್ತಿಕ್ಕಿದ ಹತಾಶೆಯೋ ?
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

ನಿಜ , ನಾವು ಮನುಜರು ಕಟುಕರು ಸಂಪತ್ತಿನಾಸೆಗಾಗಿ ಗಣಿಗಾರಿಕೆಯ ನೆಪದಲ್ಲಿ
ನಿನ್ನ ಗರ್ಭವ ಸೀಳಿ ಲೂಟಿ ಮಾಡಿದೆವು
ಕೋಟಿ ಮಾಡಿದೆವು ಕೋಟೆ ಕಟ್ಟಿದೆವು
ನಿನ್ನ ಧೂಳು ಮೆತ್ತಿಕೊಂಡು ಮದವೇರಿ ಮಲಗಿಕೊಂಡೆವು
ನನಗೊಂದು ಆಣೆಮಾಡು
ಅರಳುವ ಹೂಗಳ ಚಿಗುರಲ್ಲೆ ಚಿವುಟದಿರು
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

No comments:

Post a Comment