about me

Friday, 13 June 2014

ಬುಡುಬುಡಿಕೆ...!

ಪಾಪಿ ಹಣೆಮ್ಯಾಗು ಬರ್ದವ್ನೆ ಬ್ರಹ್ಮ ಬರ್ಕತ್ತು
ಅಳ್ಸಂಗಿಲ್ಲ ಬುಡಂಗಿಲ್ಲ ಅವ್ನ ನಿಯತ್ತು
ಬರ್ದಂಗ್ ಬದುಕ್ಬೇಕು ಎಲ್ಲಾ ಅವ್ನಾಟ
ಹೇಳ್ದಂಗ್ ನಡೀಬೇಕು ಹೇಳ್ಕೊಟ್ ಪಾಠ

ಹಾಲ್ ಕುಡುದ್ರು ಬದ್ಕಂಗಿಲ್ಲ
ವಿಷ ಕುಡ್ದೋರ್ ಪಾಡೇನು
ಮಣ್ಣಿನ್ ಋಣ ತೀರುಸ್ಲೇಬೇಕು
ಮಣ್ಣಿಗೋಗಕ್ ಮುಂಚೇನೆ
ಮನ್ಷನ್ ಜನ್ಮ ತೊಳ್ಕಂಬೇಕು
ಕರ್ಮ ಮಾಡಿದ್ ಕೈಯಲ್ಲಿ

ಸೇಂದಿ ಕುಡ್ಕಂಡ್ ಬಾಯ್ ಒರಸ್ಕಂಡ್ರೆ ಆಯ್ತು
ನಮಗ್ಯಾಕ್ಬೇಕು ಕುಡುಕ್ರು ಸವಾಸ
ಸುಳ್ಳೇಳುದ್ರು ಹೆಂಡ್ರು ಬಯ್ತಾಳೆ
ಕಣ್ ಕೆಂಪಾಗಯ್ತೆ
ಹೆಂಡ ಕುಡುದ್ಮೇಲ್ ಸುಳ್ ಹೇಳ್ಬಾರ್ದು
ಹೊಟ್ಟೆ ತಂಪಾಗಯ್ತೆ

ಹಣೆಗ್ ವಿಭೂತಿ ಬಳ್ಕಂಡ್ ಹಣೆಬರ ಮುಚ್ಕೊಳ್ಳೋಕ್ಕಾಗಲ್ಲ
ಹಣೇಲ್ ಬರ್ದಿದ್ ಯಾವ್ದೂ ಸುಳ್ಳಾಗಕ್ಕಿಲ್ಲ
ಬುಡ್ ಬುಡುಕೇಲಿ ಹೇಳಿದ್ದೆಲ್ಲ ನಿಜವಲ್ಲ
ಬುಡ್ ಬುಡುಕೇಲಿ ಹೇಳಿದ್ದೆಲ್ಲ ನಿಜವಲ್ಲ.....!!

Saturday, 31 May 2014

ನಿನದೇ ದಾರಿ ...!!

ಎದೆಯೊಳ್ಗೊಂದ್ ಪೆನ್ನು ಬರೆದಯ್ತೆ
ಕೆಂಪು ಇಂಕಿನಲ್ಲಿ
ಎದೆಯ ಪುಸ್ತಕದ ಹಾಳೆಗಳೆಲ್ಲಾ
ಖಾಲಿ ಖಾಲಿ ...,
ಅಕ್ಷರಗಳೆಲ್ಲಾ ಕೆಂಪು ಕೆಂಪು ...

ಬರೆದು ಕೊಳ್ಳಲೇನಿದೆ,ಬರೆದದ್ದೆಲ್ಲಾ ಆಗಿದೆ
ಹೋಗು ಎಲ್ಲೇ ಹೋಗು ದಾರಿ ನಿನ್ನದೆ
ಎಡವಿ ಬಿದ್ದರೂ ಎತ್ತೋರಿಲ್ಲ ನಿನಗೆ ನೀನೇ
ಕನಸುಗಳ ಬೆನ್ನೇರಿ ಹೋಗು ನೀ ಸವಾರಿ
ಪಯಣದಲಿ ನಿನಗದೇ ದಾರಿ
ಗೆಲುವಿನ ಸಿಂಚನಕೆ ಬೆನ್ನು ಬಿದ್ದ ಪರಿ...

ಆಗಸಕೆ ಏಣಿ ಹಾಕಲು
ಹತ್ತು ನೀ ಅವಕಾಶದ ಮೆಟ್ಟಿಲು
ಏನೇ ಎದುರಾದರೂ ಮೆಟ್ಟಿ ನಿಲ್ಲು ಸವಾಲು
ಗರಿಕೆದರಿದೆ ಆಸೆಯ ನವಿಲು
ಬಾಳೆ ಎಲೆಗೂ ಪಾಲಿದೆ ಅನ್ನದ ಋಣ
ನಾಳೆಗಾದರೂ ತೀರಿಸು ಮಣ್ಣಿನ ಋಣ...!!

Tuesday, 27 May 2014

ಉಳಿದು ಕೊಂಡದ್ದು.....!

ಯಾರಿಗೆಂದೋ ಬರೆದು ನೆಡಲಾಗದೆ
ಉಳಿದ ಗೋರಿಯ ಕಲ್ಲುಗಳು
ಯಾರೋ ಬರುವರೆಂದು ಕೂತು ಕೊಡಲಾಗದೆ
ಓಡಿಬಂದ ಬಾರಿನ ಬಿಲ್ಲುಗಳು...!

ನಗಲಾಗದಿದ್ದರೂ ನಕ್ಕಂತೆ
ನಟಿಸಿ ತೋರಿಸಿಕೊಂಡ ಹಲ್ಲುಗಳು
ಕಾಯುತ್ತಾ ಕುಳಿತು ಕೊಂಡವರಿಗೆ ಹೋಗದೆ
ಕಾಯಿಸಿ ಸತಾಯಿಸಿದ ಬೆಂಚುಕಲ್ಲುಗಳು...!

ಯಾವುದಕ್ಕೂ ಪ್ರಯತ್ನಿಸದೆ
ಎಲ್ಲಾ ಹಣೆಬರಹ ಎಂಬ ನಮ್ಮದೇ ನಿಲುವುಗಳು
ಯಾರೋ ಗೆದ್ದರೆಂದು ಪಟಾಕಿ ಹಚ್ಚಿ
ಸಂಭ್ರಮಿಸಲಾಗದ ಗೆಲುವುಗಳು...!

ಯಾರ ಹೆಸರಿನೊಂದಿಗೆ ಇರಬೇಕಾಗಿದ್ದು
ಅವರಿಗೇ ಕೊಟ್ಟಂತ ಲಗ್ನಪತ್ರಿಕೆಗಳು,
ಯಾರನ್ನು ನೋಡಬಾರದೆಂದುಕೊಂಡಿದ್ದು
ಅವರಿಗೇ ಕೊಟ್ಟಂತ ವಿಸಿಟಿಂಗ್ ಕಾರ್ಡುಗಳು...!

ತಲೆ ಕೆಡಿಸಿಕೊಂಡ ತಲೆಬುಡವಿಲ್ಲದ
ತರಲೆ ತಕರಾರಿನ ತರ್ಕಗಳು
ಬುದ್ಧಿ ಬೆಳೆಯದಿದ್ದರು
ಬೆಳೆಸಿಕೊಂಡಂತೆ ಬೆಳೆದ ಗಡ್ಡಗಳು...!

ಗುರುತಿಲ್ಲದಿದ್ದರೂ ಗುರುತಿಗಾಗಿ
ಗುರುತಿಸಿಕೊಂಡ ಗುರುತಿನ ಚೀಟಿಗಳು
ಮರೆತೇ ಹೋಗಿದ್ದರು ಮರೆಯುವುದಕ್ಕಾಗಿ
ಮೆರೆಯುವ ಗುಂಡಿನ ಪಾರ್ಟಿಗಳು...!

ಬೇಡದಿದ್ದರೂ ಬೇಕೆಂಬ ಹಂಬಲಗಳು
ಬೇಕಿದ್ದರೂ ಸಿಗಲಾರದಂತ ಸಂಬಂಧಗಳು
ಬಂಧಗಳೆಲ್ಲ ಸಂಬಂಧಗಳಲ್ಲಿ
ಬೆಂದು ಹೋಗಿದ್ದರೂ
ತೀರಿಸಲಾಗದಾಗಿದೆ ಋಣಾನುಬಂಧ
ಉಳಿದುಕೊಂಡವವು...............!

Thursday, 1 May 2014

ಎಂದು ಬರುವೆ

ಗೆಳೆಯ ಬಾಗಿಲಲ್ಲೇ ನಿಂತಿಹೆನು
ಒಳಗೂ ಹೋಗದೆ,ಹೊರಗೂ ಬಾರದೆ
ನೀ ಬರುವೆಯೆಂಬ ಆಸೆಯ ಬುತ್ತಿ ಹೊರಲಾರದೆ
ನೀ ಇರುವಲ್ಲಿ ಬರಲೂ ಆಗದೆ,,,

ಎದೆಯಲೇನೋ ಸಂಭ್ರಮ
ನಲ್ಲನ ನೆನಪು ನೆನೆಸಿದೆ ಈ ಪ್ರೇಮ
ಅಣಕಿಸುತಿದೆ ನನ್ನ ನನದೇ ಕಣ್ಣುಗಳು
ದೃಷ್ಟಿಯಾದೀತೇನೊ ಹಾಕಿಕೊಳ್ಳಲೇ ಕಪ್ಪುಬೊಟ್ಟು
ತಲೆಯೇರಿ ಕುಳಿತಿದೆ ಮಲ್ಲಿಗೆ ಹೂದಂಡು
ಮೈ ಮರೆತು ಬೀಳುವನೇನೋ ನಾ ನನ್ನೇ  ಕಂಡು

ತಡಮಾಡದಿರು ಇನ್ನೂ ಬಾ ಇನಿಯ
ಬಾರದೆ ಸತಾಯಿಸದಿರು ತಾಳೆನು ವಿರಹದುರಿಯ
ಕಾತರಿಸಿ ಕಾದಿಹೆನು ಅಪ್ಪುಗೆಯೊಂದ ನೀಡುವೆಯಾ
ನೀನೇ ಬಂದು ಪ್ರೇಮದ ಒಪ್ಪಿಗೆ ಕೇಳುವೆಯಾ

ಇನ್ನೇನು ಬಂದೇಬಿಟ್ಟಿತು ನೀ ಬರುವ ಕ್ಷಣಗಳು
ವಿಸ್ಮಯಳಾಗಿಹೆನು ,, ಕಾದಿರುವೆನು,,,
ಆದರೂ ಬಾರದೆ ಮಳೆಹನಿಯಾಗಿ ಬಂದು
ನನ್ನೊಡನೆ ನೆಂದು
ಪ್ರೇಮದ ಚಳಿತಂದು
ಹೋದೆಯಾ ಕಾಣದಂತೆ,ಮತ್ತೆ ಕಾಯುವೆನು
ಕೊಟ್ಟು ಹೋಗು ನೀ ಬರುವ ದಿನಾಂಕವನ್ನು.

Tuesday, 11 March 2014

ಯಾರು...?

ಬಾನಿಗೆ ತಾರೆ
ಕೊಳದಲ್ಲಿ ತಾವರೆ
ಇಟ್ಟವರಾರು...?

ಹುಟ್ಟಿಗೆ ಸಾವು
ನಗುವಿಗೆ ನೋವು
ಕೊಟ್ಟವರಾರು...?

ಬೆಳಕಿಗೆ ಕತ್ತಲೆ
ಜನುಮಕೆ ಬೆತ್ತಲೆ
ಇಟ್ಟವರಾರು...?

ನದಿಗೆ ತೀರವ
ಕಡಲಿಗಾಳವ
ನೀಡಿದವರಾರು...?

ಭೂಮಿಗೆ ಬಾನು
ನಿನಗೆ ನಾನು
ಸೇರಿಸಿದವರಾರು...?

Thursday, 6 March 2014

ಇನ್ನೊಂದು ಮಾತಿದೆ ಕೇಳು ಬಾ...

ಬಿಡದೆ ಸುರಿದ ಜಡಿಮಳೆಯ ನಡುವೆಯೂ
ನಿನ್ನ ನಡೆಯ ಕಾಲ ಸದ್ದಿನ ಸಪ್ಪಳಕೆ
ಒಂದೊಂದೇ ಹನಿ ಬೀಳುತಿರಲು
ಇದೇನು ಪ್ರೀತಿಗಾಗಿ ಸುರಿದ ಮಳೆಹನಿಯೋ
ಮಳೆಯಾಗಿ ಸುರಿದ ಪ್ರೀತಿಯ ಹನಿಗಳೋ
ಹೇಳು ಬಾ...ಇನ್ನೊಂದು ಮಾತಿದೆ ಕೇಳು ಬಾ ॥

ಆ ಮೋಡಗಳು ಮುತ್ತಿಟ್ಟಂತೆ ಗಿರಿಸಾಲುಗಳ
ನೀನೇ ಅಪ್ಪಣೆ ಕೊಟ್ಟಂತೆ,ಮುಂಗುರುಳು
ಬಾಗಿ ಬಾಗಿ ಮುತ್ತ ನೀಡುತ್ತಿವೆ,
ನೋಡಲಾಗದೆ ನನ್ನ ಕಣ್ಣಹನಿಗಳು ಜಾರಿ
ಮಳೆ ಹನಿಯೊಂದಿಗೆ ಸೇರುವ ಮೊದಲೇ
ಹೇಳು ಬಾ...ಇನ್ನೊಂದು ಮಾತಿದೆ ಕೇಳು ಬಾ ॥

ತುಂತುರು ಮಳೆಹನಿಯ ಸದ್ದಿನ ನಡುವೆಯೂ
ಅದೇನು ಮೋಡಿಯೋ ನಿನ್ನ ಕೈಬಳೆಗಳು ಮಾಡಿವೆ
ಮಿಟುಕಿಸದಿರು ಕಣ್ಣನ್ನು
ಸೂರ್ಯ ಕಿರಣ ತಾಗಿ ಹೋಗುವ ಮುನ್ನ
ನಿನ್ನ ಕಣ್ಣ ಕೊಳದಲ್ಲಿ ಮಂಜು ಕರಗುವ ಮುನ್ನ
ಹೇಳು ಬಾ...ಇನ್ನೊಂದು ಮಾತಿದೆ ಕೇಳು ಬಾ ॥

ಅದೇ ನೆನಪು

ಪದೇ ಪದೇ ನೆನಪಾಗುತಿದೆ ನಿನ್ನ ನೆನಪು
ಅದೇಕೋ ಪದೇ ಪದೇ ಅದೇ ನೆನಪು
ಪದೇ ಪದೇ ಮನಸು ಹೊರಳುತಿದೆ ನಿನ್ನೆಡೆಗೆ
ಅದೇಕೋ ಪದೇ ಪದೇ ಅದೇ ನೆನಪು
ಪದೇ ಪದೇ ನಿನದೇ ಬಿಂಬ ಜಗನೋಡಲು
ಅದೇಕೋ ಪದೇ ಪದೇ ಅದೇ ನೆನಪು
ಪದೇ ಪದೇ ಅದೇ ಕನಸು
ಅದೇಕೋ ನಿನ್ನ ನೋಡುವ ಮನಸು
ಪದೇ ಪದೇ ಅದೇ ಹಾಡು ಗುನುಗುತಿರಲು
ಅದೇಕೋ ಅದೇ ನಿನದೇ ನೆನಪು
ಪದೇ ಪದೇ ನಿನ್ನೊಡನೆ ಮಾತನಾಡುವಾಸೆ
ಅದೇಕೋ ನಿನದೇ ನೆನಪಾಗಲು
ಪದೇ ಪದೇ ನಿನ್ನ ಹೆಸರೇ ನೆನಪಿಗೆ ಬರಲು
ಅದೇಕೊ ತುಟಿ ತೆರೆದಾಗಲೂ,ಕೂಗುವಾಗಲೂ
ಅದೇಕೋ ಪದೇ ಪದೇ ನೆನಪಾಗಲು
ಪದೇ ಪದೇ ನೀನೇ ಸುಳಿದಾಡಿದಂತೆ  ಸನಿಹ
ಅದೇಕೋ ನಾ ಜಗದ ಒಡನಾಟದಲ್ಲಿರಲು
ಪದೇ ಪದೇ ಅದೇ ನೆನಪು ಅದೇಕೋ ...?