ಯಾರಿಗೆಂದೋ ಬರೆದು ನೆಡಲಾಗದೆ
ಉಳಿದ ಗೋರಿಯ ಕಲ್ಲುಗಳು
ಯಾರೋ ಬರುವರೆಂದು ಕೂತು ಕೊಡಲಾಗದೆ
ಓಡಿಬಂದ ಬಾರಿನ ಬಿಲ್ಲುಗಳು...!
ನಗಲಾಗದಿದ್ದರೂ ನಕ್ಕಂತೆ
ನಟಿಸಿ ತೋರಿಸಿಕೊಂಡ ಹಲ್ಲುಗಳು
ಕಾಯುತ್ತಾ ಕುಳಿತು ಕೊಂಡವರಿಗೆ ಹೋಗದೆ
ಕಾಯಿಸಿ ಸತಾಯಿಸಿದ ಬೆಂಚುಕಲ್ಲುಗಳು...!
ಯಾವುದಕ್ಕೂ ಪ್ರಯತ್ನಿಸದೆ
ಎಲ್ಲಾ ಹಣೆಬರಹ ಎಂಬ ನಮ್ಮದೇ ನಿಲುವುಗಳು
ಯಾರೋ ಗೆದ್ದರೆಂದು ಪಟಾಕಿ ಹಚ್ಚಿ
ಸಂಭ್ರಮಿಸಲಾಗದ ಗೆಲುವುಗಳು...!
ಯಾರ ಹೆಸರಿನೊಂದಿಗೆ ಇರಬೇಕಾಗಿದ್ದು
ಅವರಿಗೇ ಕೊಟ್ಟಂತ ಲಗ್ನಪತ್ರಿಕೆಗಳು,
ಯಾರನ್ನು ನೋಡಬಾರದೆಂದುಕೊಂಡಿದ್ದು
ಅವರಿಗೇ ಕೊಟ್ಟಂತ ವಿಸಿಟಿಂಗ್ ಕಾರ್ಡುಗಳು...!
ತಲೆ ಕೆಡಿಸಿಕೊಂಡ ತಲೆಬುಡವಿಲ್ಲದ
ತರಲೆ ತಕರಾರಿನ ತರ್ಕಗಳು
ಬುದ್ಧಿ ಬೆಳೆಯದಿದ್ದರು
ಬೆಳೆಸಿಕೊಂಡಂತೆ ಬೆಳೆದ ಗಡ್ಡಗಳು...!
ಗುರುತಿಲ್ಲದಿದ್ದರೂ ಗುರುತಿಗಾಗಿ
ಗುರುತಿಸಿಕೊಂಡ ಗುರುತಿನ ಚೀಟಿಗಳು
ಮರೆತೇ ಹೋಗಿದ್ದರು ಮರೆಯುವುದಕ್ಕಾಗಿ
ಮೆರೆಯುವ ಗುಂಡಿನ ಪಾರ್ಟಿಗಳು...!
ಬೇಡದಿದ್ದರೂ ಬೇಕೆಂಬ ಹಂಬಲಗಳು
ಬೇಕಿದ್ದರೂ ಸಿಗಲಾರದಂತ ಸಂಬಂಧಗಳು
ಬಂಧಗಳೆಲ್ಲ ಸಂಬಂಧಗಳಲ್ಲಿ
ಬೆಂದು ಹೋಗಿದ್ದರೂ
ತೀರಿಸಲಾಗದಾಗಿದೆ ಋಣಾನುಬಂಧ
ಉಳಿದುಕೊಂಡವವು...............!
No comments:
Post a Comment