ಬಿಡದೆ ಸುರಿದ ಜಡಿಮಳೆಯ ನಡುವೆಯೂ
ನಿನ್ನ ನಡೆಯ ಕಾಲ ಸದ್ದಿನ ಸಪ್ಪಳಕೆ
ಒಂದೊಂದೇ ಹನಿ ಬೀಳುತಿರಲು
ಇದೇನು ಪ್ರೀತಿಗಾಗಿ ಸುರಿದ ಮಳೆಹನಿಯೋ
ಮಳೆಯಾಗಿ ಸುರಿದ ಪ್ರೀತಿಯ ಹನಿಗಳೋ
ಹೇಳು ಬಾ...ಇನ್ನೊಂದು ಮಾತಿದೆ ಕೇಳು ಬಾ ॥
ಆ ಮೋಡಗಳು ಮುತ್ತಿಟ್ಟಂತೆ ಗಿರಿಸಾಲುಗಳ
ನೀನೇ ಅಪ್ಪಣೆ ಕೊಟ್ಟಂತೆ,ಮುಂಗುರುಳು
ಬಾಗಿ ಬಾಗಿ ಮುತ್ತ ನೀಡುತ್ತಿವೆ,
ನೋಡಲಾಗದೆ ನನ್ನ ಕಣ್ಣಹನಿಗಳು ಜಾರಿ
ಮಳೆ ಹನಿಯೊಂದಿಗೆ ಸೇರುವ ಮೊದಲೇ
ಹೇಳು ಬಾ...ಇನ್ನೊಂದು ಮಾತಿದೆ ಕೇಳು ಬಾ ॥
ತುಂತುರು ಮಳೆಹನಿಯ ಸದ್ದಿನ ನಡುವೆಯೂ
ಅದೇನು ಮೋಡಿಯೋ ನಿನ್ನ ಕೈಬಳೆಗಳು ಮಾಡಿವೆ
ಮಿಟುಕಿಸದಿರು ಕಣ್ಣನ್ನು
ಸೂರ್ಯ ಕಿರಣ ತಾಗಿ ಹೋಗುವ ಮುನ್ನ
ನಿನ್ನ ಕಣ್ಣ ಕೊಳದಲ್ಲಿ ಮಂಜು ಕರಗುವ ಮುನ್ನ
ಹೇಳು ಬಾ...ಇನ್ನೊಂದು ಮಾತಿದೆ ಕೇಳು ಬಾ ॥
No comments:
Post a Comment