about me

Saturday, 14 March 2015

ಸಿಗಬಾರದೆ

ಇನ್ನೂ ಎಷ್ಟು ಹುಡುಕುವುದು ಸಿಗಬಾರದೆ
ಗೆಲ್ಲಲಾರದಷ್ಟು ಸೋತಿಹೆನು ನೀ ಸಿಗದೆ
ನಿನ್ನದೇ ಗೆಲುವೆಂದುಕೊಂಡು ಒಮ್ಮೆ ಸೋಲಬಾರದೆ
ಪ್ರೀತಿಯಲ್ಲಷ್ಟೇ ಸೋಲಬಹುದು ಮತ್ತೆ ಮತ್ತೆ

ಬಿಗುಮಾನದ ಮೋಡ ಸರಿದು
ಪ್ರೀತಿಯ ಆಶಾಕಿರಣ ಮೂಡಿ
ಬಾಳೆಲ್ಲಾ ಬೆಳಗಲಿ...
ಅನುರಾಗದ ಕಾರ್ಮೋಡ ಕವಿದು
ಪ್ರೇಮದ ಮಳೆ ಹನಿ ಹನಿಯಾಗಿ
ತುಂತುರು ಬೀಳಲಿ.

ಇರಬಹುದು ಹೂವಿನ ಮೇಲೆ ಮಂಜು
ಇರದಿರಲಿ ಪ್ರೀತಿಯಲ್ಲೆಂದೆಂದು ನಂಜು
ಆಣೆ ಪ್ರಮಾಣ ಬೆಟ್ಟದಷ್ಟು ಮಾಡಿ
ಕೊಡಬಹುದು ಭರವಸೆಯ
ಜೊತೆಗಿರುವೆ ಬಿಡು ನಿರಾಶೆಯ
ಬದುಕು ಬಡವಾದರೂ
ಪ್ರೀತಿ ಬಡವಾಗದಿರಲಿ.

ಮಾಡಬೇಕಾಗಿಲ್ಲ ಯುದ್ಧ .

ಗುಂಡಿಗೆಯೊಳಗೊಂದು ಬಂಡಿ ನೆತ್ತರು
ಕೊತಕೊತನೆ ಕುದಿಯುತಿರಲು
ಆ ಕ್ರೌರ್ಯದ ಗೆರೆ ದಾಟಿ
ನಡೆಯಬಹುದೇನೋ ಮತ್ತೊಮ್ಮೆ
ಮಹಾಭಾರತ ...?

ಮದ, ಮತ್ಸರ, ಕಾಮ, ಕ್ರೋಧ
ಅಂತರಂಗದಲ್ಲಿ ಧಗಧಗಿಸುತಿರಲು
ಈ ರಣರಂಗದಲಿ ಖಡ್ಗವಿಡಿದು ನಿಲ್ಲಲು
ಎಂಟೆದೆಯೇನೂ ಬೇಕಾಗಿಲ್ಲ ..

ಪ್ರೀತಿ , ಮಮತೆ, ಸ್ನೇಹ , ತ್ಯಾಗ
ಎಲ್ಲವನ್ನೂ ಗೆಲ್ಲಬಹುದು
ಹೃದಯದ ತುಂಬಾ ಪ್ರೀತಿ ಇರಲು
ಮಾಡಬೇಕಾಗಿಲ್ಲ ಯಾವ ಯುದ್ಧವನ್ನು...!

Monday, 2 March 2015

ಹೇಗೋ ಇದ್ದೆ...!!

ಪೂರ್ತಿ ಹಾಳಾಗಿರಲಿಲ್ಲ ಹೇಗೋ ಇದ್ದೆ
ಕಂಡ ಮೇಲೆ ನಿನ್ನ ಕಳೆದುಕೊಂಡೆ ನಿದ್ದೆ
ಇನ್ನೇನು ಉಳಿದಿಲ್ಲ ನೋಡೊಮ್ಮೆ ನೀನು
ಎದೆಯ ಮೇಲೆ ಕೈಯನ್ನಿಡು ಬದುಕುವೆನು ನಾನು

ಸಲೀಸಾಗಿ ಮೋಸ ಹೋಗುವ ಮುನ್ನ
ಬರಸೆಳೆದು ತಬ್ಬಿಕೊಳ್ಳುವೆ ನಿನ್ನ
ನೀನೇ ಹೇಳು ಇನ್ನೆಷ್ಟು ದೂರದಲ್ಲಿ
ನಿಂತುಕೊಳ್ಳಲಿ ನಾನು

ತೀರಾ ಹೊಸದೇನಲ್ಲ ನಿನ್ನೊಡನಾಟ
ಸಾಕು ಮಾಡು ಸಲುಗೆಯಿಂದಲೇ
ಕಾಡದಿರು ನೋಡದಿರು ವಾರೆ ನೋಟದಲೇ
ತುಂಬಿಕೊಂಡಿರುವೆನು ನಿನ್ನೇ

ಬೇಸರಿಕೆಯ ಸರಿಸಿ ಇರಿಸಿಕೊ
ಸನಿಹಕೆ ಬಂದು ಒರಗಿಕೊ
ಹೆಗಲಿಗೊಂದು ಗುಟ್ಟು ಹೇಳುವೆ
ಕಣ್ಣು ಮುಚ್ಚಿ ಕೇಳಿಕೊ ಸುಮ್ಮನೆ
ಕೆನ್ನೆಗೊಂದು ಮುತ್ತನಿಡುವೆ
ಇತ್ತಬಾರದೆ...ಎತ್ತಲೂ ಹೋಗದೇ ..!!

ನಮ್ಮದೇ ಬದುಕು .

ಸುಮ್ಮನಿರದ ಮನಸ್ಸಲ್ಲಿಂದು ಮತ್ತದೇ ಮೌನ
ಹೃದಯ ಮನಬಿಚ್ಚುವಾಗ
ಮನಸ್ಸಿಗೇಕೊ ತಲ್ಲಣ
ದೂರದಲ್ಲೆಲ್ಲೋ ಮತ್ತೊಂದು ಹೃದಯ ಕೂಗಿದಂತೆ
ಎರಡು ಹೃದಯಗಳ ಮೌನ ಸಂಭಾಷಣೆ
ನುಡಿದವು ಮನಸುಗಳು ಅವೆಷ್ಟೋ ಆಣೆ

ಈ ಜನುಮಕು ಇನ್ನೊಂದು ಜನುಮಕು
ನಂಟಿರುವುದು ನಿಜವಾದರೆ ಸಾಕು
ನೀ ಬಿಟ್ಟು ಹೋದ ಮರುಗಳಿಗೆಯೇ
ಇನ್ನೊಂದು ಜನ್ಮಕು ನಾನಾಗಿಯೇ
ಹಠವ ಮಾಡಿ ಮತ್ತೆ ಹುಟ್ಟುವೆನು
ಕನಸುಗಳ ಕದಿಯಲು ಬರುವೆನು

ತಿರುಗಿ ನೋಡದಿರು ನಾ ಹಿಂದೆ ಬಾರೆನು
ತಿರುತಿರುಗಿ ನೋಡಿದರು ನಾನಿರುವೆನು
ಕೊರಗಿ ಮರುಗದಿರು ಜಗವೇ ನಮ್ಮದು
ನಮ್ಮಯ ಜಗದಲಿ ನಮ್ಮದೇ ಬದುಕು
ನಮ್ಮದೇ ಬದುಕು ...

Tuesday, 18 November 2014

ಅನಿಸುವಷ್ಟು...!

ಸುಮ್ಮನಿದ್ದುಬಿಡಬೇಕೆನಿಸುವಷ್ಟು
ಗೊಂದಲ ಮನಸಿನೊಳಗೆ
ಎದ್ದು ಓಡಬೇಕೆನಿಸುವಷ್ಟು
ತುಮುಲ ಕನಸಿನೊಳಗೆ
ಇನ್ನೂ ಇರಬೇಕೆನಿಸುವಷ್ಟು
ಹಂಬಲ ಜಗದೊಳಗೆ
ಭ್ರಮೆಯಿಂದ ಹೊರಬರಬೇಕೆನಿಸುವಷ್ಟು
ವಾಸ್ತವತೆಯ ಬಲೆಯೊಳಗೆ
ಒಂದೊಂದೇ ದಾರದ ಎಳೆಯಾಗಿ
ಬಿಡಿಸಿಕೊಳ್ಳುವಷ್ಟು ತಾತ್ಸಾರ...!!

ಇನ್ನೂ ತೊದಲುವಷ್ಟು ಅಕ್ಷರ
ಬಹುಶಃ ನಾಲಗೆಗೂ ದೂರ
ಎಲ್ಲವನ್ನೂ
ಹೇಳಿಕೊಳ್ಳಬೇಕೆನಿಸುವಷ್ಟು ಕಾತರ
ಕೇಳಿಸಿಕೊಳ್ಳುವಷ್ಟು ಉದಾರ
ತೋರಬೇಕಷ್ಟೇ...!!

ಇಷ್ಟು ಹೇಳಿದರಷ್ಟೇ ಸಾಲದು
ಹೇಳದಷ್ಟು ಕೇಳದಷ್ಟು ಅವೆಷ್ಟೋ
ಲೆಕ್ಕ ಹಾಕಬೇಕೆನಿಸುವಷ್ಟು
ಗುಣಿಸಿಕೊಳ್ಳಬೇಕೆನಿಸುವಷ್ಟು
ಸುಖದ ಸೂತ್ರದ ಜಾಮಿಟ್ರಿ ಬಾಕ್ಸಿನಲ್ಲಿ
ಬರೆದುಕೊಳ್ಳುವಷ್ಟು ಬರವೇನಿಲ್ಲ
ಕಪ್ಪು ಕಡ್ಡಿಯ ಪೆನ್ಸೀಲಿನಲ್ಲಿ
ಆದರೆ
ಅಳಿಸಿಹಾಕುವಷ್ಟು
ನೆನಪುಗಳಿವೆ ರಬ್ಬರಿನಲ್ಲಿ...!!

Tuesday, 2 September 2014

ಯಾರವಳೊ ಮಾಯೆ...?

ಸುಪ್ತಮನಸ್ಸಿನೊಳಡಗಿಹುದು ಗುಪ್ತಗಾಮಿನಿಯ ಛಾಯೆ
ಛಾಯೆಯೊಳಗೂ ಜ್ವಲಿಸುತಿಹಳು ಯಾರವಳೊ ಮಾಯೆ
ನಿತ್ಯ ನಿರಂತರ ಪ್ರೇಮಧಾರೆಯ ಹರಿವಿನಾ ಪರ್ವ
ಸ್ವಪ್ನದಿ ಕಾಣುಹ ಚೆಲುವಿಗಿಂತವಳು ಅಖರ್ವ

ಪ್ರೇಮದ ಅಜಾರಿಗೆ ನೀಡಬಲ್ಲಳು ಒಲವಿನಮೃತ
ಅಮೃತ ನೀಡಲವಳು ಮಡಿಯುವಾಸೆ ಜೀವಂತ
ಹೃದಯ ಗೆದ್ದ ಅನಭಿಷಿಕ್ತ ಪ್ರೇಮದೇವತೆ
ತೆರೆದಿಡಲೆ ಮನದಾಸೆಯ ಮೌನದ ಕಂತೆ

ಇನ್ನೂ ಕಾಡುತಿಹಳು ತಿಳಿಯದು ಅರಿವಿನಾ ತಿರುಳು
ಇನ್ನೂ ನೋಡುತಿರಲು ಕಳೆಯುವುದು ಹಗಲು ಇರುಳು
ಬಿಡದೆ ಬಂಧಿಸಿಹಳು ಕಬಂಧ ಬಾಹುವಿನಲಿ
ಅದುವೇ ಸುಪ್ತಮನಸಿನ ಖಾಲಿಯಾದ ಅಮಲಿನಲಿ....!!!

ಧಿಕ್ಕಾರವಿರಲಿ...!!

ಓ ವಸುಂಧರೆ ಧರೆ ಧರಣೀ ಧರಿತ್ರಿ
ವಸುಧೆ ವಸುಮತಿ ಸಹನಾಧರಣಿ ಧಾರಿಣಿ
ಕರುಣಾಮಯಿ ಎಂದೆಲ್ಲಾ ಬಣ್ಣಿಸಿಕೊಂಡ ಮಹಾತಾಯಿ
ಇಂದೇಕೆ ಕ್ರೂರಿಯಾದೆ ಈ ಮುನಿಸೇಕೆ
ಈ ಮೌನವೇಕೆ ಭೂತಾಯಿ
ಆಡಿಕೊಂಡಿದ್ದ ಕಂದಮ್ಮಗಳನ್ನು ಕರೆದು
ನಿನ್ನ ಒಡಲಿಗಾಕಿಕೊಂಡು ಮೌನಿಯಾದೆಯಲ್ಲ
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

ಅಮ್ಮ ಎಂದು ಕೂಗಿದ ಕಂದನ ರೋಧನೆಯ
ಕೇಳದೆ ಕಿವುಡಾದೆಯಾ ?
ಎಡವಿ ಬೀಳುವಾಗ ಎಚ್ಚರಿಸದೆ
ಕಾಣದ ಕಣ್ಣಂತಾದೆಯಾ ?
ಹೆತ್ತವರ ಆಕ್ರಂದನ ನಿನಗೆ ಜೈಕಾರವಾಯಿತೆ ?
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

ಹನಿನೀರಿಗಾಗಿ ನಿನ್ನ ನಾಭಿಯ ಕತ್ತರಿಸಿದರ ಮತ್ಸರವೇ ?
ಮತಿಗೆಟ್ಟ ಮನುಕುಲದ ಅತಿರೇಕಿಯೆಂಬ ತಾತ್ಸಾರವೇ ?
ಹಾಲ್ಗೆನ್ನೆಯ ಮುದ್ದು ಮುಖವ ಮುದ್ದಾಡೋ ಆಸೆಯೋ ?
ಕರೆದರೂ ಬಾರರೆಂಬ ಹತ್ತಿಕ್ಕಿದ ಹತಾಶೆಯೋ ?
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.

ನಿಜ , ನಾವು ಮನುಜರು ಕಟುಕರು ಸಂಪತ್ತಿನಾಸೆಗಾಗಿ ಗಣಿಗಾರಿಕೆಯ ನೆಪದಲ್ಲಿ
ನಿನ್ನ ಗರ್ಭವ ಸೀಳಿ ಲೂಟಿ ಮಾಡಿದೆವು
ಕೋಟಿ ಮಾಡಿದೆವು ಕೋಟೆ ಕಟ್ಟಿದೆವು
ನಿನ್ನ ಧೂಳು ಮೆತ್ತಿಕೊಂಡು ಮದವೇರಿ ಮಲಗಿಕೊಂಡೆವು
ನನಗೊಂದು ಆಣೆಮಾಡು
ಅರಳುವ ಹೂಗಳ ಚಿಗುರಲ್ಲೆ ಚಿವುಟದಿರು
ಕ್ಷಮೆಯಿರಲಿ...!
ನಿನಗೆ ನನ್ನದೊಂದು ಧಿಕ್ಕಾರವಿರಲಿ.