ಸುಮ್ಮನಿದ್ದುಬಿಡಬೇಕೆನಿಸುವಷ್ಟು
ಗೊಂದಲ ಮನಸಿನೊಳಗೆ
ಎದ್ದು ಓಡಬೇಕೆನಿಸುವಷ್ಟು
ತುಮುಲ ಕನಸಿನೊಳಗೆ
ಇನ್ನೂ ಇರಬೇಕೆನಿಸುವಷ್ಟು
ಹಂಬಲ ಜಗದೊಳಗೆ
ಭ್ರಮೆಯಿಂದ ಹೊರಬರಬೇಕೆನಿಸುವಷ್ಟು
ವಾಸ್ತವತೆಯ ಬಲೆಯೊಳಗೆ
ಒಂದೊಂದೇ ದಾರದ ಎಳೆಯಾಗಿ
ಬಿಡಿಸಿಕೊಳ್ಳುವಷ್ಟು ತಾತ್ಸಾರ...!!
ಇನ್ನೂ ತೊದಲುವಷ್ಟು ಅಕ್ಷರ
ಬಹುಶಃ ನಾಲಗೆಗೂ ದೂರ
ಎಲ್ಲವನ್ನೂ
ಹೇಳಿಕೊಳ್ಳಬೇಕೆನಿಸುವಷ್ಟು ಕಾತರ
ಕೇಳಿಸಿಕೊಳ್ಳುವಷ್ಟು ಉದಾರ
ತೋರಬೇಕಷ್ಟೇ...!!
ಇಷ್ಟು ಹೇಳಿದರಷ್ಟೇ ಸಾಲದು
ಹೇಳದಷ್ಟು ಕೇಳದಷ್ಟು ಅವೆಷ್ಟೋ
ಲೆಕ್ಕ ಹಾಕಬೇಕೆನಿಸುವಷ್ಟು
ಗುಣಿಸಿಕೊಳ್ಳಬೇಕೆನಿಸುವಷ್ಟು
ಸುಖದ ಸೂತ್ರದ ಜಾಮಿಟ್ರಿ ಬಾಕ್ಸಿನಲ್ಲಿ
ಬರೆದುಕೊಳ್ಳುವಷ್ಟು ಬರವೇನಿಲ್ಲ
ಕಪ್ಪು ಕಡ್ಡಿಯ ಪೆನ್ಸೀಲಿನಲ್ಲಿ
ಆದರೆ
ಅಳಿಸಿಹಾಕುವಷ್ಟು
ನೆನಪುಗಳಿವೆ ರಬ್ಬರಿನಲ್ಲಿ...!!
No comments:
Post a Comment