about me

Saturday, 31 May 2014

ನಿನದೇ ದಾರಿ ...!!

ಎದೆಯೊಳ್ಗೊಂದ್ ಪೆನ್ನು ಬರೆದಯ್ತೆ
ಕೆಂಪು ಇಂಕಿನಲ್ಲಿ
ಎದೆಯ ಪುಸ್ತಕದ ಹಾಳೆಗಳೆಲ್ಲಾ
ಖಾಲಿ ಖಾಲಿ ...,
ಅಕ್ಷರಗಳೆಲ್ಲಾ ಕೆಂಪು ಕೆಂಪು ...

ಬರೆದು ಕೊಳ್ಳಲೇನಿದೆ,ಬರೆದದ್ದೆಲ್ಲಾ ಆಗಿದೆ
ಹೋಗು ಎಲ್ಲೇ ಹೋಗು ದಾರಿ ನಿನ್ನದೆ
ಎಡವಿ ಬಿದ್ದರೂ ಎತ್ತೋರಿಲ್ಲ ನಿನಗೆ ನೀನೇ
ಕನಸುಗಳ ಬೆನ್ನೇರಿ ಹೋಗು ನೀ ಸವಾರಿ
ಪಯಣದಲಿ ನಿನಗದೇ ದಾರಿ
ಗೆಲುವಿನ ಸಿಂಚನಕೆ ಬೆನ್ನು ಬಿದ್ದ ಪರಿ...

ಆಗಸಕೆ ಏಣಿ ಹಾಕಲು
ಹತ್ತು ನೀ ಅವಕಾಶದ ಮೆಟ್ಟಿಲು
ಏನೇ ಎದುರಾದರೂ ಮೆಟ್ಟಿ ನಿಲ್ಲು ಸವಾಲು
ಗರಿಕೆದರಿದೆ ಆಸೆಯ ನವಿಲು
ಬಾಳೆ ಎಲೆಗೂ ಪಾಲಿದೆ ಅನ್ನದ ಋಣ
ನಾಳೆಗಾದರೂ ತೀರಿಸು ಮಣ್ಣಿನ ಋಣ...!!

Tuesday, 27 May 2014

ಉಳಿದು ಕೊಂಡದ್ದು.....!

ಯಾರಿಗೆಂದೋ ಬರೆದು ನೆಡಲಾಗದೆ
ಉಳಿದ ಗೋರಿಯ ಕಲ್ಲುಗಳು
ಯಾರೋ ಬರುವರೆಂದು ಕೂತು ಕೊಡಲಾಗದೆ
ಓಡಿಬಂದ ಬಾರಿನ ಬಿಲ್ಲುಗಳು...!

ನಗಲಾಗದಿದ್ದರೂ ನಕ್ಕಂತೆ
ನಟಿಸಿ ತೋರಿಸಿಕೊಂಡ ಹಲ್ಲುಗಳು
ಕಾಯುತ್ತಾ ಕುಳಿತು ಕೊಂಡವರಿಗೆ ಹೋಗದೆ
ಕಾಯಿಸಿ ಸತಾಯಿಸಿದ ಬೆಂಚುಕಲ್ಲುಗಳು...!

ಯಾವುದಕ್ಕೂ ಪ್ರಯತ್ನಿಸದೆ
ಎಲ್ಲಾ ಹಣೆಬರಹ ಎಂಬ ನಮ್ಮದೇ ನಿಲುವುಗಳು
ಯಾರೋ ಗೆದ್ದರೆಂದು ಪಟಾಕಿ ಹಚ್ಚಿ
ಸಂಭ್ರಮಿಸಲಾಗದ ಗೆಲುವುಗಳು...!

ಯಾರ ಹೆಸರಿನೊಂದಿಗೆ ಇರಬೇಕಾಗಿದ್ದು
ಅವರಿಗೇ ಕೊಟ್ಟಂತ ಲಗ್ನಪತ್ರಿಕೆಗಳು,
ಯಾರನ್ನು ನೋಡಬಾರದೆಂದುಕೊಂಡಿದ್ದು
ಅವರಿಗೇ ಕೊಟ್ಟಂತ ವಿಸಿಟಿಂಗ್ ಕಾರ್ಡುಗಳು...!

ತಲೆ ಕೆಡಿಸಿಕೊಂಡ ತಲೆಬುಡವಿಲ್ಲದ
ತರಲೆ ತಕರಾರಿನ ತರ್ಕಗಳು
ಬುದ್ಧಿ ಬೆಳೆಯದಿದ್ದರು
ಬೆಳೆಸಿಕೊಂಡಂತೆ ಬೆಳೆದ ಗಡ್ಡಗಳು...!

ಗುರುತಿಲ್ಲದಿದ್ದರೂ ಗುರುತಿಗಾಗಿ
ಗುರುತಿಸಿಕೊಂಡ ಗುರುತಿನ ಚೀಟಿಗಳು
ಮರೆತೇ ಹೋಗಿದ್ದರು ಮರೆಯುವುದಕ್ಕಾಗಿ
ಮೆರೆಯುವ ಗುಂಡಿನ ಪಾರ್ಟಿಗಳು...!

ಬೇಡದಿದ್ದರೂ ಬೇಕೆಂಬ ಹಂಬಲಗಳು
ಬೇಕಿದ್ದರೂ ಸಿಗಲಾರದಂತ ಸಂಬಂಧಗಳು
ಬಂಧಗಳೆಲ್ಲ ಸಂಬಂಧಗಳಲ್ಲಿ
ಬೆಂದು ಹೋಗಿದ್ದರೂ
ತೀರಿಸಲಾಗದಾಗಿದೆ ಋಣಾನುಬಂಧ
ಉಳಿದುಕೊಂಡವವು...............!

Thursday, 1 May 2014

ಎಂದು ಬರುವೆ

ಗೆಳೆಯ ಬಾಗಿಲಲ್ಲೇ ನಿಂತಿಹೆನು
ಒಳಗೂ ಹೋಗದೆ,ಹೊರಗೂ ಬಾರದೆ
ನೀ ಬರುವೆಯೆಂಬ ಆಸೆಯ ಬುತ್ತಿ ಹೊರಲಾರದೆ
ನೀ ಇರುವಲ್ಲಿ ಬರಲೂ ಆಗದೆ,,,

ಎದೆಯಲೇನೋ ಸಂಭ್ರಮ
ನಲ್ಲನ ನೆನಪು ನೆನೆಸಿದೆ ಈ ಪ್ರೇಮ
ಅಣಕಿಸುತಿದೆ ನನ್ನ ನನದೇ ಕಣ್ಣುಗಳು
ದೃಷ್ಟಿಯಾದೀತೇನೊ ಹಾಕಿಕೊಳ್ಳಲೇ ಕಪ್ಪುಬೊಟ್ಟು
ತಲೆಯೇರಿ ಕುಳಿತಿದೆ ಮಲ್ಲಿಗೆ ಹೂದಂಡು
ಮೈ ಮರೆತು ಬೀಳುವನೇನೋ ನಾ ನನ್ನೇ  ಕಂಡು

ತಡಮಾಡದಿರು ಇನ್ನೂ ಬಾ ಇನಿಯ
ಬಾರದೆ ಸತಾಯಿಸದಿರು ತಾಳೆನು ವಿರಹದುರಿಯ
ಕಾತರಿಸಿ ಕಾದಿಹೆನು ಅಪ್ಪುಗೆಯೊಂದ ನೀಡುವೆಯಾ
ನೀನೇ ಬಂದು ಪ್ರೇಮದ ಒಪ್ಪಿಗೆ ಕೇಳುವೆಯಾ

ಇನ್ನೇನು ಬಂದೇಬಿಟ್ಟಿತು ನೀ ಬರುವ ಕ್ಷಣಗಳು
ವಿಸ್ಮಯಳಾಗಿಹೆನು ,, ಕಾದಿರುವೆನು,,,
ಆದರೂ ಬಾರದೆ ಮಳೆಹನಿಯಾಗಿ ಬಂದು
ನನ್ನೊಡನೆ ನೆಂದು
ಪ್ರೇಮದ ಚಳಿತಂದು
ಹೋದೆಯಾ ಕಾಣದಂತೆ,ಮತ್ತೆ ಕಾಯುವೆನು
ಕೊಟ್ಟು ಹೋಗು ನೀ ಬರುವ ದಿನಾಂಕವನ್ನು.