ಅಡಿಗಡಿಗೂ ಗಡಿಯಾರದ ನಡೆಯು
ಎಡೆಮಾಡಿದೆ ತಡೆಯಲಾರದೆಡೆಗೆ
ಕಡೆಗೂ ಬೀಸಿದೆ ಸಮಯದ ಬಡಿಗೆ
ಹಾಡಿದೆ ಎದೆಯ ಬಡಿತದ ಸದ್ದಿಗೆ
ಕಡೆಗಣಿಸಿದವರ ನಡೆಯ ನುಡಿಗೆ
ಬಡಿದು ಕೊಂಡಿರುವ ಘಂಟೆಯ ಗಂಟಲಿಗೆ
ತಡಕಾಡಿದೆ ಕಾಡುವ ಬೇಡುವ ಸದ್ದಿಗೆ
ಸುದ್ದಿಯ ಕೊಡುವ ಅದೇ ಜಿದ್ದಿಗೆ
ಬಿದ್ದಿ ಬಿದ್ದಿ ಓಡುತಿದೆ ಅದೇ ವೇಗದಲಿ
ಹಿಡಿದು ತಡೆಯಬಲ್ಲೆಯಾ
ಗಡಿಯಾರದ ಬಂಡಿಯಾ....??
ಅಂತ್ಯದೆಡೆಗೆ (towards the end....)
Sunday, 23 August 2015
ತಡೆಯಬಲ್ಲೆಯಾ...?
Tuesday, 18 August 2015
ಬದುಕುವೆನು ನಾನು
ಬರೆಯುವ ಮೊದಲೇ ಮರೆತು ಹೋಗಿದೆ
ನನ್ನಿಷ್ಟದ ಸಾಲು
ಹೇಗೆ ಹೇಳಲಿ ..? ಏನು ಮಾಡಲಿ ..?
ಜಿಗಿದಾಡುವ ಮನದ ಮೂಲೆಯಲ್ಲಿ
ಜೋಕಾಲಿಯಂತೆ ಜೀಕುವಾಗ ನೀನು
ಸುಡುವ ಪ್ರೇಮದ ಒಡಲೊಳಗೆ
ತುಸು ಯಾಮಾರಿದಾಗ
ಹೇಗೆ ಹೇಳಲಿ ..? ಏನು ಮಾಡಲಿ ..?
ಜಗದ ಕೊನೆಯ ತುದಿಯ ಬಳಿ ನಿಂತು
ಕೂಗುವಾಗ ಸಾವಿರ ಸಲ
ಹೇಳ ಹೆಸರಿಲ್ಲದಂತೆ ಮರೆತು ಹೋಗಿ ಬಿಡು
ಮತ್ತೆ ಬಾರದಂತೆ ನೀನು,
ಬದುಕಬಹುದು ನಾನು
ನೀನಿಲ್ಲದೆ...! ಏನೂ ಇಲ್ಲದೆ....!!
Friday, 3 July 2015
ಸುಮ್ಮನಿರದ ಪ್ರಾಯ...!!
ಸುಮ್ಮನಿರದ ಪ್ರಾಯ ಮಾಡಿತೊಂದು ಹೃದಯದಿ ಗಾಯ
ಇರುವುದೊಂದು ಹೃದಯ ಹಂಚಲಾರೆ ಯಾರಿಗು ಇನಿಯ
ಎಲ್ಲಿ ಹೋದೆ ಪ್ರೀತಿಯ ಗೆಳೆಯ ,
ಒಂಟಿಯಾಗಿ ನನ್ನನು ಬಿಟ್ಟು ಹೇಳಲಾರದೆ...!
ಕೊಟ್ಟು ಬಿಡುವೆ ಕೇಳು ಪ್ರಾಣವಾದ್ರು ಬಿಡುವೆ ನಾನು
ಬಿಟ್ಟು ಇರೆನು ನಿನ್ನಯ ನಂಟು
ಬರದೆ ಇರುವೆಯಾ...?
ಸುಮ್ಮನಿರದ ಪ್ರಾಯ ಮಾಡಿತೊಂದು ಹೃದಯದಿ ಗಾಯ.
ಸನಿಹ ಬರಲು ನಾನು ಬಿಡದೆ ಬಳಸಿ ಒಮ್ಮೆ ತಬ್ಬು
ಒಲವ ಅಮಲಿನಲ್ಲಿ ತೇಲುವಂತ ನಶೆಯ ಸುಧೆಯೊ
ತೆರೆದುಕೊಂಡ ಜೀವದ ಸೆಲೆಯೊ
ಬಾರೊ ಬೇಗನೇ ....!
ಮನದಿ ಕುಳಿತ ಜೀವ ಯಾರ ಹಂಗು ಬೇಡ ನಿನಗೆ
ನೋಡಲಾರೆ ಯಾಕೇ ಒಲವೆ
ಒಮ್ಮೆ ನನ್ನನೂ...!
ಇರುವುದೊಂದು ಹೃದಯ ಹಂಚಲಾರೆ ಯಾರಿಗು ಇನಿಯ.
ಕರೆದು ಕರೆದು ಒಳಗೆ ನನ್ನನ್ನೇಕೆ ಕೊಲುತಿಹೆಯಲ್ಲ
ನೆನೆದು ನೆನೆದು ನಿನ್ನ ಇಂದು ನಾನು ಬಳಲಿದೆನಲ್ಲ
ಕಾಯುವಲ್ಲು ಸುಖವನೆ ಕಂಡೆ
ಏನು ಸಂತಸಾ
ಬರದೆ ಇರಲು ನೀನು ಕಾಯುತೀನಿ ಶಬರಿ ನಾನು
ಕಾದು ಬಿಡುವುದೇ ಈ ಹೃದಯ
ಎಷ್ಟು ಜನ್ಮವೂ..?
ಸುಮ್ಮನಿರದ ಪ್ರಾಯ ಮಾಡಿತೊಂದು ಹೃದಯದಿ ಗಾಯ...!!
Saturday, 14 March 2015
ಮೌನ...!
ಶ್....! ಎಂದು ಕ್ಲಾಸಿಗೆ ಬಂದ ಟೀಚರ್ , ಬಾಯಿ ಮೇಲೆ ಬೆರಳಿಟ್ಟಾಗ ತರಗತಿಯೆಲ್ಲಾ " ಗಪ್ ಚುಪ್ " ಎಂದು ವಿದ್ಯಾರ್ಥಿಗಳೆಲ್ಲಾ ಸದ್ದಿಲ್ಲದೆ ಕುಳಿತುಕೊಳ್ಳುವ ಕ್ರಿಯಾ ವಿಶೇಷಣವನ್ನು ಮೌನ ಎಂದು ಕರೆಯಲು ಅಷ್ಟು ಸಮಂಜಸವಲ್ಲ ಎನಿಸುತ್ತದೆ . ಏಕೆಂದರೆ ಅದು ಸದ್ದನ್ನು ಹದ್ದುಬಸ್ತಿನಲ್ಲಿಟ್ಟ ಕಾಲವಾಗಿರುವುದರಿಂದ ' ನಿಶ್ಯಬ್ಧ' ಎನ್ನಲಡ್ಡಿಯಿಲ್ಲ.
ಮೌನವೆಂಬುದು ಮನಸಿನ ಮಾತು . ಅದನ್ನು ಕಿವಿಯ ಬಳಿ ಕೂಗಿ ಹೇಳುವಂತದ್ದಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅನುಭವಿಸುವ ಸದ್ದಲ್ಲದ ಸದ್ದೇ ಈ ಮೌನ ಎಂಬುದು ಅನುಭವಿಸಿದವರ ಅನುಭವ ಅಂಬೋಣ . ಹೇಳುವ ಮಾತಿನಲ್ಲಿ ಅರ್ಥವೊಂದಿದ್ದರೆ , ಹೇಳದ ಮಾತಿನ ಮೌನದಲ್ಲಿ ನೂರಾರು ಅರ್ಥಗಳಿರುತ್ತವೆ. " ಮಾತು ಬೆಳ್ಳಿ , ಮೌನ ಬಂಗಾರ " ಎನ್ನುವುದು ಇದಕ್ಕೆ ಇರಬಹುದೇನೊ...?. ಪ್ರೇಮಿಗಳಿಗೆ ಕೇಳಿದರೆ ಬಹುಶಃ ಮೌನದ ಮಾತು ಅರ್ಥವಾಗಬಲ್ಲದು.
ಕಣ್ಣಂಚಲ್ಲೇ ಕರೆದು ಕೂರಿಸುವ, ತುಟಿಯಂಚಲ್ಲೇ ನಕ್ಕು ಮತ್ತು ಬರಿಸುವ ಮಾಟದ ಶಕ್ತಿ ಮೌನಕ್ಕಿದೆ. ಕೆಲವೊಮ್ಮೆ ಎಷ್ಟೋ ಪ್ರಶ್ನೆಗಳಿಗೆ ಮೌನವೇ ಉತ್ತರವಾಗಿಬಿಡುತ್ತದೆ. ಹಿರಿಯರು ಹೇಳಿದ ಹಾಗೆ ' ಮೌನಂ ಸಮ್ಮತಿ ಲಕ್ಷಣಂ ' ಎಂಬುದು ಹೆಚ್ಚು ಸಂದರ್ಭಗಳಲ್ಲಿ ಅನ್ವಯಿಸಿಬಿಡುತ್ತದೆ. ಹಾಗಂದ ಮಾತ್ರಕ್ಕೆ ಮಾತೇ ಆಡಬಾರದು ಅಂತಲ್ಲ , ಅಥವಾ ಮಾತಿಗೆ ಬೆಲೆಯಿಲ್ಲ ಅಂತೇನಿಲ್ಲ. ಮಾತು ಆಡಲೇಬೇಕಾದ ಸಂದರ್ಭದಲ್ಲಿ ಮೌನ ಸಲ್ಲದು. ಹಾಗೆಯೇ ಎಷ್ಟೋ ಸಂದರ್ಭಗಳಲ್ಲಿ ಮೌನವೇ ವಾಸಿ ಎನಿಸಿಬಿಡುತ್ತದೆ.
ನಿಜಕ್ಕೂ ಮೌನವೆಂಬುದು ನಮ್ಮೆಲ್ಲರ ಮನಸ್ಸಿಗೆ ಟಾನಿಕ್ ಇದ್ದಂತೆ . ಮೌನವೆಂಬುದು ಧ್ಯಾನವಿದ್ದಂತೆ .ಮೌನವು ಮನಸ್ಸಿನ ಶಸ್ತ್ರದಂತೆ. ಅದು ಒಳಗೇ ಸಾಣೆ ಹಿಡಿದು ಹರಿತಾದಷ್ಟು ಒಳಗಿನ ಅಂತ:ಶಕ್ತಿ ಇಮ್ಮಡಿಯಾಗಬಲ್ಲದು. ಆತ್ಮವಿಶ್ವಾಸ ವೃದ್ಧಿಸಬಲ್ಲದು, ಯಾವುದೇ ವಿಚಾರವನ್ನು ಅಳೆದು ತೂಗಿ ನೋಡುವ ಕ್ಷಮತೆ ಹೆಚ್ಚಬಲ್ಲದು, ಮನಸ್ಸಿನಲ್ಲೇ ತರ್ಕಿಸಿ ತಕ್ಕುದಾದ ಮುತ್ತಿನಂತ ಮಾತು ಹೊರಬರಬಲ್ಲದು. ಹತ್ತು ಮಾತು ಹೇಳುವ ಬದಲು ಒಂದು ಮುತ್ತಿನಂಥ ಮಾತು ಬರುವುದು ಮನಸ್ಸು ವಿಚಾರಗಳಲ್ಲಿ ಪಕ್ವಗೊಂಡಾಗ . ವ್ಯಕ್ತಿ ಹೆಚ್ಚು ಮೌನಿಯಾದಷ್ಟು ಆತನ ಮನಸ್ಸು ಹೆಚ್ಚು ಧೃಡವಾಗುತ್ತಾ ಗಟ್ಟಿಗೊಳ್ಳುವ ಸಾಧ್ಯತೆ ಹೆಚ್ಚು ಅಂದಮೇಲೆ ಮೌನಕ್ಕೂ ಮಾತಿದೆ ಎಂದಾಯ್ತು...!!!
ಸಿಗಬಾರದೆ
ಇನ್ನೂ ಎಷ್ಟು ಹುಡುಕುವುದು ಸಿಗಬಾರದೆ
ಗೆಲ್ಲಲಾರದಷ್ಟು ಸೋತಿಹೆನು ನೀ ಸಿಗದೆ
ನಿನ್ನದೇ ಗೆಲುವೆಂದುಕೊಂಡು ಒಮ್ಮೆ ಸೋಲಬಾರದೆ
ಪ್ರೀತಿಯಲ್ಲಷ್ಟೇ ಸೋಲಬಹುದು ಮತ್ತೆ ಮತ್ತೆ
ಬಿಗುಮಾನದ ಮೋಡ ಸರಿದು
ಪ್ರೀತಿಯ ಆಶಾಕಿರಣ ಮೂಡಿ
ಬಾಳೆಲ್ಲಾ ಬೆಳಗಲಿ...
ಅನುರಾಗದ ಕಾರ್ಮೋಡ ಕವಿದು
ಪ್ರೇಮದ ಮಳೆ ಹನಿ ಹನಿಯಾಗಿ
ತುಂತುರು ಬೀಳಲಿ.
ಇರಬಹುದು ಹೂವಿನ ಮೇಲೆ ಮಂಜು
ಇರದಿರಲಿ ಪ್ರೀತಿಯಲ್ಲೆಂದೆಂದು ನಂಜು
ಆಣೆ ಪ್ರಮಾಣ ಬೆಟ್ಟದಷ್ಟು ಮಾಡಿ
ಕೊಡಬಹುದು ಭರವಸೆಯ
ಜೊತೆಗಿರುವೆ ಬಿಡು ನಿರಾಶೆಯ
ಬದುಕು ಬಡವಾದರೂ
ಪ್ರೀತಿ ಬಡವಾಗದಿರಲಿ.
ಮಾಡಬೇಕಾಗಿಲ್ಲ ಯುದ್ಧ .
ಗುಂಡಿಗೆಯೊಳಗೊಂದು ಬಂಡಿ ನೆತ್ತರು
ಕೊತಕೊತನೆ ಕುದಿಯುತಿರಲು
ಆ ಕ್ರೌರ್ಯದ ಗೆರೆ ದಾಟಿ
ನಡೆಯಬಹುದೇನೋ ಮತ್ತೊಮ್ಮೆ
ಮಹಾಭಾರತ ...?
ಮದ, ಮತ್ಸರ, ಕಾಮ, ಕ್ರೋಧ
ಅಂತರಂಗದಲ್ಲಿ ಧಗಧಗಿಸುತಿರಲು
ಈ ರಣರಂಗದಲಿ ಖಡ್ಗವಿಡಿದು ನಿಲ್ಲಲು
ಎಂಟೆದೆಯೇನೂ ಬೇಕಾಗಿಲ್ಲ ..
ಪ್ರೀತಿ , ಮಮತೆ, ಸ್ನೇಹ , ತ್ಯಾಗ
ಎಲ್ಲವನ್ನೂ ಗೆಲ್ಲಬಹುದು
ಹೃದಯದ ತುಂಬಾ ಪ್ರೀತಿ ಇರಲು
ಮಾಡಬೇಕಾಗಿಲ್ಲ ಯಾವ ಯುದ್ಧವನ್ನು...!
Monday, 2 March 2015
ಹೇಗೋ ಇದ್ದೆ...!!
ಪೂರ್ತಿ ಹಾಳಾಗಿರಲಿಲ್ಲ ಹೇಗೋ ಇದ್ದೆ
ಕಂಡ ಮೇಲೆ ನಿನ್ನ ಕಳೆದುಕೊಂಡೆ ನಿದ್ದೆ
ಇನ್ನೇನು ಉಳಿದಿಲ್ಲ ನೋಡೊಮ್ಮೆ ನೀನು
ಎದೆಯ ಮೇಲೆ ಕೈಯನ್ನಿಡು ಬದುಕುವೆನು ನಾನು
ಸಲೀಸಾಗಿ ಮೋಸ ಹೋಗುವ ಮುನ್ನ
ಬರಸೆಳೆದು ತಬ್ಬಿಕೊಳ್ಳುವೆ ನಿನ್ನ
ನೀನೇ ಹೇಳು ಇನ್ನೆಷ್ಟು ದೂರದಲ್ಲಿ
ನಿಂತುಕೊಳ್ಳಲಿ ನಾನು
ತೀರಾ ಹೊಸದೇನಲ್ಲ ನಿನ್ನೊಡನಾಟ
ಸಾಕು ಮಾಡು ಸಲುಗೆಯಿಂದಲೇ
ಕಾಡದಿರು ನೋಡದಿರು ವಾರೆ ನೋಟದಲೇ
ತುಂಬಿಕೊಂಡಿರುವೆನು ನಿನ್ನೇ
ಬೇಸರಿಕೆಯ ಸರಿಸಿ ಇರಿಸಿಕೊ
ಸನಿಹಕೆ ಬಂದು ಒರಗಿಕೊ
ಹೆಗಲಿಗೊಂದು ಗುಟ್ಟು ಹೇಳುವೆ
ಕಣ್ಣು ಮುಚ್ಚಿ ಕೇಳಿಕೊ ಸುಮ್ಮನೆ
ಕೆನ್ನೆಗೊಂದು ಮುತ್ತನಿಡುವೆ
ಇತ್ತಬಾರದೆ...ಎತ್ತಲೂ ಹೋಗದೇ ..!!